ಹೊಂದಾಣಿಕೆ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ:ಹಾಸನ ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ

ಹೊಂದಾಣಿಕೆ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ:ಹಾಸನ ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ
Published on

ಹಾಸನ: ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಇಬ್ಬರು ಅಭ್ಯರ್ಥಿಗಳು ವಾಮಮಾರ್ಗದ ಮೂಲಕ ಚುನಾವಣೆ ಮಾಡುತ್ತಿದ್ದು, ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾರೊಂದಿಗೂ ಶಾಮೀಲಾಗಿಲ್ಲ. ನನ್ನ ಜೀವನದಲ್ಲಿ ಇಟ್ಟ ಹೆಜ್ಜೆಯನ್ನು ಹಿಂದೆ ಇಡುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ನವರು ನಾಲ್ಕು ವರ್ಷ ಕುಂಭಕರ್ಣನ ರೀತಿ ನಿದ್ದೆ ಮಾಡಿ ಈಗ ರಾಜಕಾರಣದಲ್ಲಿ ಗಿಮಿಕ್ ಮಾಡಲು ಹೊರಟಿದ್ದಾರೆ. ಮಾಧ್ಯಮದಲ್ಲಿ ಸಿಕ್ಕ ವ್ಯಾಪಕ ಪ್ರಚಾರದಿಂದ ಹೀರೋ ಆಗಲು ಹೊರಟಿದ್ದಾರೆ. ಆದರೆ ಜನರು ಅದಕ್ಕೆ ಮಣೆ ಹಾಕುವುದಿಲ್ಲ. ಅದೇ ರೀತಿ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರೀತಂ ಗೌಡ ಅವರು ಬೇನಾಮಿ ಮತ್ತು ಅಕ್ರಮ ಹಣದಿಂದ ಚುನಾವಣೆ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದರು.

ಈ ಇಬ್ಬರು ಅಭ್ಯರ್ಥಿಗಳು ಯಾವುದೇ ನೈತಿಕತೆ ಇಟ್ಟುಕೊಂಡು ಜನರಲ್ಲಿ ಮತ ಕೇಳಲು ಹೋಗುತ್ತಿಲ್ಲ. ಆದರೆ ವಿನಾಕಾರಣ ನನ್ನ ಮೇಲೆ ಮತ್ತು ಪಕ್ಷದ ಮೇಲೆ ಅಪಪ್ರಚಾರ ಮಾಡಿ ಮತ ಕೇಳಲು ಹೊರಟಿದ್ದಾರೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಸ್ವಾಭಿಮಾನಿಗಳು. ಇದ್ಯಾವುದಕ್ಕೂ ಕೂಡ ಬಗ್ಗುವುದಿಲ್ಲ. ನಾನು ಜೀವನದಲ್ಲಿ ಯಾರೊಂದಿಗೂ ಕೂಡ ಶಾಮೀಲಾಗಿ ರಾಜಕಾರಣ ಮಾಡಿದವನಲ್ಲ. ಅಂತಹ ಪರಿಸ್ಥಿತಿ ಬಂದರೆ ಪ್ರಾಣವನ್ನೇ ಬಿಡುತ್ತೇನೆ. ಆದರೆ ಯಾರೊಂದಿಗೂ ಕೂಡ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಹೇಳಿದರು.

ಕ್ಷೇತ್ರದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ನನಗೆ ಬೆಂಬಲ ವ್ಯಕ್ತವಾಗುತ್ತಿದೆ. ನಾನು ಅಪ್ಪನ ಹೆಸರಿನಲ್ಲಿ ಹಾಗೂ ವಾಮಮಾರ್ಗದಿಂದ ಹಣ ಸಂಪಾದನೆ ಮಾಡಿಲ್ಲ. ಸಾಮಾನ್ಯ ಕುಟುಂಬದಿಂದ ಬಂದು, ಯಾವುದೇ ರಾಜಕೀಯ ಹಿನ್ನಲೆ ಇಲ್ಲದೆ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದಿದ್ದೇನೆ. ನಾನು ನಿಜವಾದ ಸಾಮಾನ್ಯ ಕಾರ್ಯಕರ್ತ ಎಂದು ಟಾಂಗ್ ನೀಡಿದರು.

ನನ್ನ ಬಗ್ಗೆ ಇನ್ನು ಮುಂದೆ ಯಾರಾದರೂ ವಿನಾಕಾರಣ ಮಾತನಾಡಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಬಾರಿ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಅಲ್ಲದೆ ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಚುನಾವಣೆ ಪ್ರಚಾರ ಮಾಡುತ್ತಿದ್ದೇವೆ. ಕೆಲವು ಕಾರಣಗಳಿಂದ ರಾಜ್ಯ ನಾಯಕರು ನನ್ನ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲು ಸಾಧ್ಯವಾಗಿಲ್ಲ. ಅದನ್ನು ಬಿಟ್ಟರೆ ನಾವು ಕ್ಷೇತ್ರದಲ್ಲಿ ಸಂಘಟಿತವಾಗಿ ಪ್ರಚಾರ ಮಾಡುತ್ತಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಟಿ.ಕುಮಾರ್, ವಿನಯ್ ಗಾಂಧಿ, ಮುನಿಸ್ವಾಮಿ, ಚಂದ್ರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net