ಹೊಂದಾಣಿಕೆ ಪಾಲಿಟಿಕ್ಸ್ ನಲ್ಲಿ ಖೂಬಾ ನಿಸ್ಸೀಮ

prabhu chouhan
Published on

ಔರಾದ್: ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ದಮ್ ಇದ್ರೆ ನಾನು ಹೊಂದಾಣಿಕೆ ರಾಜಕಾರಣ ಮಾಡಿರುವುದನ್ನು ಸಾಬೀತುಪಡಿಸಲಿ. ನನ್ನ ವಿರುದ್ಧ ಸುಳ್ಳು, ಅರ್ಥಹೀನ ಆರೋಪ ಮಾಡುವುದು ಸಹಿಸಲ್ಲ. ಈ ಬಗ್ಗೆ ವರಿಷ್ಠರ ಜತೆ ಚರ್ಚಿಸಲಿದ್ದು, ಅವರು ಒಪ್ಪಿಗೆ ನೀಡಿದರೆ ಖೂಬಾ ವಿರುದ್ಧ 200 ಕೋಟಿ ರೂ.ಮಾನನಷ್ಟ ಕೇಸ್ ಹಾಕುವೆ ಎಂದು ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ್ ಹೇಳಿದ್ದಾರೆ.
ಕೇಂದ್ರ ಸಚಿವರಿದ್ದುಕೊಂಡು ಖೂಬಾ ಅವರೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಪಕ್ಷದ ವಿರುದ್ಧ ಕೆಲಸ ಮಾಡಿದ್ದು ಹಲವಾರು ಸಲ ಬಹಿರಂಗವಾಗಿದೆ. ಹೀಗಿರುವಾಗ ನಾನು ಕಾಂಗ್ರೆಸ್ ನಾಯಕರ ಜತೆಗೂಡಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದೇನೆ ಎಂದು ಆರೋಪಿಸಿರುವುದು ಗಮನಿಸಿದರೆ `ಉಲ್ಟಾ ಚೋರ್ ಕೋತ್ವಾಲ್ ಕೊ ಡಾಟೆ' ಎನ್ನುವಂತಾಗಿದೆ ಎಂದು ಸೋಮವಾರ ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಖೂಬಾ ತಲೆಬುಡವಿಲ್ಲದ ಅರ್ಥಹೀನ ಹೇಳಿಕೆ ನೀಡುತ್ತಿದ್ದಾರೆ.ಅವರ ಬಗ್ಗೆ ಎಲ್ಲೆಡೆ ಪಕ್ಷದಲ್ಲೇ ಅತೃಪ್ತಿ ವ್ಯಕ್ತವಾಗುತ್ತಿದ್ದರಿಂದ ಹತಾಶರಾಗಿದ್ದಾರೆ. ನಾನು ಮೂರು ದಶಕದಿಂದ ಬಿಜೆಪಿ ನಿಷ್ಠ ಕಾರ್ಯಕರ್ತನಾಗಿ, ಪಕ್ಷವೇ ನನ್ನ ತಾಯಿ ಎಂದು ಕೆಲಸ ಮಾಡುತ್ತಿದ್ದೇನೆ. ಜನಸೇವೆಯಲ್ಲಿ ತೊಡಗಿದ್ದರಿಂದಲೇ ಔರಾದ್ ಕ್ಷೇತ್ರದ ಜನರು ನಾಲ್ಕನೇ ಬಾರಿ ಆಶೀರ್ವದಿಸಿ ವಿಧಾನಸಭೆಗೆ ಕಳಿಸಿದ್ದಾರೆ. ಪಕ್ಷದ ವರಿಷ್ಠರು ನನ್ನ ಸೇವೆ ಗುರುತಿಸಿ ಎರಡು ಸಲ ಮಂತ್ರಿ ಮಾಡಿದ್ದಾರೆ. ಆದರೆ ಸದಾ ಪಕ್ಷದವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿರುವ ಖೂಬಾ ಅವರು ನಾನು ಹೊಂದಾಣಿಕೆ ರಾಜಕಾರಣ ಮಾಡುತ್ತಿರುವೆ ಎಂದು ಹೇಳಿ ತೇಜೋವಧೆಗೆ ಪ್ರಯತ್ನಿಸಿದ್ದಾರೆ. ಖೂಬಾ ಸುಳ್ಳು, ಸ್ವಾರ್ಥದ ವಿರುದ್ಧ ಹೋರಾಟ ಮಾಡಿ ಪಕ್ಷ ಉಳಿಸುವ ಕೆಲಸ ಮಾಡುವೆ. ವರಿಷ್ಠರು ಒಪ್ಪಿದರೆ ಖೂಬಾ ವಿರುದ್ಧ 200 ಕೋಟಿ ರೂ ಮಾನನಷ್ಟ ಕೇಸ್ ಹೂಡುವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಗೆದ್ದಿರುವ ಖೂಬಾಗೆ ಪಕ್ಷ, ಸಂಘಟನೆ ಏನೆಂಬುದು ಗೊತ್ತಿಲ್ಲ. ಯಾರೊಬ್ಬ ಕಾರ್ಯಕರ್ತರಿಗೂ ಬೆಳೆಸಿಲ್ಲ. ಏನಿದ್ದರೂ ಅವರ ಪರಿವಾರ ಬೆಳೆಸುವ ಕೆಲಸ ಮಾಡಿದ್ದಾರೆ. ಇಲಾಖೆಗೊಬ್ಬ ಗುತ್ತಿಗೆದಾರರನ್ನು ತಮ್ಮ ಪರಿವಾರದವರಿಗೆ ನಿಯೋಜಿಸಿ ಹಣ ಗಳಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡುತ್ತ ಸ್ವತಃ ಕಾಂಗ್ರೆಸ್, ಇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. 2018, 2023ರ ವಿಧಾನಸಭೆ ಚುನಾವಣೆ ವೇಳೆ ನನ್ನ ವಿರುದ್ಧ ಅಭಿಯಾನ ನಡೆಸಿ ಇನ್ನಿಲ್ಲದ ಕಿರಿಕಿರಿ ಕೊಟ್ಟಿದ್ದಾರೆ. ಬೇರೆ ಕ್ಷೇತ್ರದವರಿಗೂ ಇದೇ ರೀತಿ ಮಾಡಿ ಪಕ್ಷಕ್ಕೆ ಪೆಟ್ಟು ನೀಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ದೂರಿದ್ದಾರೆ.
ಖೂಬಾಗೆ ರಾಜಕೀಯಕ್ಕೆ ಕರೆತಂದಿದ್ದೇ ನಾನು. 2014ರ ಲೋಕಸಭೆ ಚುನಾವಣೆ ವೇಳೆ ಖೂಬಾಗೆ ಬಿಜೆಪಿ ಟಿಕೆಟ್ ಕೊಡುವಂತೆ ವರಿಷ್ಠರ ಮೇಲೆ ಒತ್ತಡ ಹೇರಿದ ಮುಂಚೂಣಿಯಲ್ಲಿ ನಾನೇ ಇದ್ದೇನೆ. ಅವರ ಗೆಲುವಿಗಾಗಿ ಶ್ರಮಿಸಿದ್ದೇನೆ. ಆದರೆ ಗೆದ್ದ ಬಳಿಕ ಖೂಬಾ ಅಧಿಕಾರದ ದರ್ಪ, ಅಹಂಕಾರದಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಲು ಆರಂಭಿಸಿದ್ದಾರೆ. ಆರೇಳು ವರ್ಷಗಳಿಂದ ನನಗೆ ಬಹಳಷ್ಟು ಟಾರ್ಚರ್ ಕೊಟ್ಟಿದ್ದಾರೆ. ಔರಾದ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಎಲ್ಲ ರೀತಿಯಿಂದಲೂ ಗೆಲ್ಲಿಸಲು ಸಹಕಾರ ನೀಡಿರುವುದು ರಹಸ್ಯವಾಗಿ ಉಳಿದಿಲ್ಲ ಎಂದು ಆರೋಪಿಸಿದ್ದಾರೆ.
ಖೂಬಾ ಅವರು ಕೆಲ ಗುಂಡಾಗಳನ್ನು ಇಟ್ಟುಕೊಂಡು ಸುತ್ತಾಡುತ್ತಿದ್ದಾರೆ. ನನ್ನ ಜೀವಕ್ಕೂ ಅಪಾಯ ಬರಬಹುದಾಗಿದೆ. ಈ ಆತಂಕ ನನಗೆ ಕಾಡುತ್ತಿದೆ. ಖೂಬಾ ಅವರು ಹೀನ ಮನಸ್ಥಿತಿ ಹೊಂದಿದ್ದಾರೆ. ಅವರಲ್ಲಿ ಬಿಜೆಪಿ ತತ್ವ, ಸಿದ್ಧಾಂತಗಳೇ ಇಲ್ಲ. ಕಾಂಗ್ರೆಸ್ ಸಂಸ್ಕೃತಿ ಹಾಸುಹೊಕ್ಕಿವೆ. ಇವರ ಕುಟುಂಬ ಮೂಲತಃ ಕಾಂಗ್ರೆಸ್ ನಿಂದ ಬಂದಿರುವುದೇ ಇದಕ್ಕೆ ಕಾರಣ ಎಂದು ದೂರಿದ್ದಾರೆ.
ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಮರಾಠ ಸಮಾಜಕ್ಕೆ ಎಂಪಿ ಟಿಕೆಟ್ ನೀಡಬೇಕೆಂಬ ಆಗ್ರಹ ಮಾಡಿದ್ದಾರೆ. ಬರುವ ದಿನಗಳಲ್ಲಿ ಪಕ್ಷದ ಇನ್ನಷ್ಟು ನಾಯಕರು, ಕಾರ್ಯಕರ್ತರು ಈ ಬೇಡಿಕೆ ಮಂಡಿಸುವ ಸಾಧ್ಯತೆಗಳಿವೆ. ನಾನು ಪಕ್ಷದ ವಿರುದ್ಧ ಯಾವ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ಪಕ್ಷ ವಿರೋಧಿ ಕೆಲಸ ಮಾಡುತ್ತಿರುವವರ ವಿರುದ್ಧ ನಿರಂತರ ಧ್ವನಿ ಎತ್ತುವೆ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ತಿಳಿಸಿದ್ದಾರೆ.

ಎಂಪಿ ಟಿಕೆಟ್ ಕೊಡಬೇಡಿ
ಬೀದರ್ ಲೋಕಸಭೆ ಕ್ಷೇತ್ರದಿಂದ ಮತ್ತೆ ಬಿಜೆಪಿ ಗೆಲ್ಲಬೇಕು, ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸಬೇಕು ಎಂದಾದರೆ ಯಾವ ಕಾರಣಕ್ಕೂ 2024ರ ಚುನಾವಣೆಯಲ್ಲಿ ಭಗವಂತ ಖೂಬಾ ಅವರಿಗೆ ಟಿಕೆಟ್ ನೀಡಬಾರದು ಎಂದು ಶಾಸಕ ಪ್ರಭು ಚವ್ಹಾಣ್ ಆಗ್ರಹಿಸಿದ್ದಾರೆ. ಖೂಬಾ ಬದಲಾಗಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಹೊಸ ಅಧ್ಯಾಯ ಆರಂಭಿಸಬೇಕು. ಕೆಲ ವರ್ಷದಿಂದ ಖೂಬಾ ಅವರು ಬೀದರ್ ಬಿಜೆಪಿಯಲ್ಲಿ ಗುಂಪುಗಾರಿಕೆ, ಭಿನ್ನಮತ ಸೃಷ್ಟಿಸಿದ್ದಾರೆ. ಅವರಿಂದ ಪಕ್ಷಕ್ಕೆ, ಜಿಲ್ಲೆಗೆ, ಸಮಾಜಕ್ಕೆ ಏನೇನೂ ಲಾಭ ಇಲ್ಲ. ಪಕ್ಷ ವಿರೋಧಿ ಕೆಲಸಗಳು ಮಾಡುವ ಕಾರಣಕ್ಕೆ ಖೂಬಾ ವಿರೋಧಿ ಅಲೆ ಎದ್ದಿದೆ. ಇಂಥ ಸಂಸದರು, ಸಚಿವರೇ ನಮಗೆ ಬೇಡ ಎಂದು ಹೇಳುತ್ತಿದ್ದಾರೆ. ಹೀಗಾಗಿ ವರಿಷ್ಠರು ಇತ್ತ ಚಿತ್ತ ಹರಿಸಬೇಕು ಎಂದು ತಿಳಿಸಿದ್ದಾರೆ.

ಬಿಜೆಪಿ ಹೋಳು ಮಾಡಿದ್ದಾರೆ
ಭಗವಂತ ಖೂಬಾ ಅವರಿಗೆ ಸ್ವಂತ ವರ್ಚಸ್ಸಿಲ್ಲ. ಸಂಘಟನಾ ಶಕ್ತಿ ಇಲ್ಲವೇ ಇಲ್ಲ. ಮೋದಿ ಅಲೆಯಲ್ಲಿ ಗೆಲ್ಲುತ್ತಿರುವ ನನಗೆ ಯಾರೂ ಕೈ ಹಿಡಿಯುವವರಿಲ್ಲ ಎಂದು ದರ್ಪದ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ, ವೈಯಕ್ತಿಕ ಸ್ವಾರ್ಥಕ್ಕಾಗಿ ತಮ್ಮದೇ ಗುಂಪು ಕಟ್ಟಿಕೊಂಡು ತಿರುಗುತ್ತಿದ್ದಾರೆ. ಅನೇಕರ ತ್ಯಾಗ, ಶ್ರಮದಿಂದ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಲಾಗಿದೆ. ಆದರೆ ಖೂಬಾ ಸಂಸದ, ಸಚಿವರಾದ ಮೇಲೆ ಬೀದರ್ ಬಿಜೆಪಿ ಒಡೆದು ಹೋಳಾಗಿದೆ. ನಿತ್ಯ ಗುಂಪುಗಾರಿಕೆ ಮಾಡುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಹಾಳು ಮಾಡಲು ಮುಂದಾಗಿದ್ದಾರೆ ಎಂದು ಚವ್ಹಾಣ್ ಗಂಭೀರ ಆರೋಪ ಹೊರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net