

ತುಮಕೂರು: ಸಿದ್ಧಗಂಗಾ ಮಠದ ಹಿಂಭಾಗದಲ್ಲಿರುವ ರಾಮದೇವರ ಬೆಟ್ಟದ ಮೇಲಿನ ಹೊಂಡದಲ್ಲಿ ಬಿದ್ದು ವಿದ್ಯಾರ್ಥಿ ಮೃತಪಟ್ಟಿದ್ದು, ಭಾನುವಾರ ಬೆಳಗ್ಗೆ ಶವ ಪತ್ತೆಯಾಗಿದೆ.
ಮಠದ 10ನೇ ತರಗತಿ ವಿದ್ಯಾರ್ಥಿ ಗಗನ್‌ಗೌಡ (16) ಮೃತ. ಮಠದಲ್ಲಿ 2018 ರಿಂದ ವಿದ್ಯಾಭ್ಯಾಸ ಮಾಡುತ್ತಿದ್ದ ಈತ ನೆಲಮಂಗಲ ತಾಲೂಕು ಕಾಕೋಳ ಗ್ರಾಮದ ಪ್ರಕಾಶ್ ಎಂಬುವವರ ಮಗ. ಜು.16ರಂದು ನಾಪತ್ತೆ ಆಗಿದ್ದ ಬಗ್ಗೆ ಕ್ಯಾತಸಂದ್ರ ಠಾಣೆಯಲ್ಲಿ ವಿದ್ಯಾರ್ಥಿ ತಂದೆ ದೂರು ದಾಖಲಿಸಿದ್ದರು. ಭಾನುವಾರ ಬೆಳಗ್ಗೆ ರಾಮದೇವರ ಬೆಟ್ಟದ ಹೊಂಡದಲ್ಲಿ ಮೃತದೇಹ ಪತ್ತೆಯಾಗಿದೆ.
ಸ್ಥಳೀಯರು ಬೆಟ್ಟದ ಮೇಲೆ ಹೋಗಿದ್ದಾಗ ಶವ ನೋಡಿ ಮಠದ ಗಮನಕ್ಕೆ ತಂದಿದ್ದು ಮಠದ ಸಿಬ್ಬಂದಿ ಬೆಟ್ಟದ ಮೇಲೆ ತೆರಳಿ ಪರಿಶೀಲಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಪಿಎಸ್‌ಐ ಓಂಪ್ರಕಾಶ್‌ಗೌಡ, ಪ್ರೊಬೆಷನರಿ ಸಬ್ ಇನ್‌ಸ್ಪೆಕ್ಟರ್ ಮೂರ್ತಿ, ಎಎಸ್‌ಐ ಆರಾಧ್ಯ ಸ್ಥಳ ಪರಿಶೀಲಿಸಿದರು.
ಅನುಮಾನಗಳಿಗೆ ಎಡೆಮಾಡಿದ ಸಾವು : ಬೆಟ್ಟದ ಮೇಲಿನ ಹೊಂಡದಲ್ಲಿ ಶವ ಪತ್ತೆ ಆಗಿರುವುದು ಅನುಮಾನಗಳಿಗೆ ಕಾರಣವಾಗಿದೆ, ಒಬ್ಬನೇ ಬೆಟ್ಟದ ಮೇಲೆ ಹೋಗಿದ್ದನಾ ? ಅಥವಾ ಜತೆಯಲ್ಲಿ ಯಾರಾದರೂ ಇದ್ದರಾ ?, ಈಜಲು ತೆರಳಿದ್ದನಾ ಅಥವಾ ಹೊಂಡದಲ್ಲಿ ಬಿದ್ದಿದ್ದ ಚಿಲ್ಲರೆ ಕಾಸಿನ ಆಸೆಗೆ ಹೋಗಿದ್ದನಾ ಎಂಬ ಬಗ್ಗೆ ಅನುಮಾನಗಳಿವೆ. ಎಲ್ಲ ಆಯಾಮದಲ್ಲಿಯೂ ತನಿಖೆ ನಡೆದಿದೆ.