ಕಲ್ಕಟ್ಟೆ ಪುಸ್ತಕದ ಮನೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಶ್ರೀ ಗುರುಕೃಪಾ ಸಂಗೀತ ಸೇವಾ ಟ್ರಸ್ಟ್, ಸೂರಂಕಣ, ದೀವಿಗೆ ಬಳಗದ ಆಶ್ರಯದಲ್ಲಿ ಶ್ರೀ ವಿನಾಯಕನಗರದ ಹೊಂಡದ ಗಣಪತಿ ದೇವಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಭಕ್ತಿಗೀತೆ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಕ್ತಿಗೀತೆಗಳನ್ನು ನಿರಂತರವಾಗಿ ಬರೆಯುತ್ತಿದ್ದ ಕಲ್ಕಟ್ಟೆಯ ಮಲ್ಲೇಶರಾವ್ ಅವರ ಸವಿನೆನಪಿನಲ್ಲಿ ಈ ಗಾನ ಸರಣಿ ಹೊರಬರುತ್ತಿರುವುದು ವಿಶೇಷ. ಶೃಂಗೇರಿಯಲ್ಲಿ ಮಲ್ಲೇಶಯ್ಯ ಎಂದರೆ ಅತಿ ಜನಪ್ರಿಯ ಹೆಸರು. ಅವರ ಪುತ್ರ ನಾಗರಾಜರಾವ್ ಕಲ್ಕಟ್ಟೆಯವರು ಇಲ್ಲಿ ಅವರ ಸ್ಮರಣೆಯನ್ನು ಧಾರ್ಮಿಕ ಕ್ಷೇತ್ರಗಳಿಗೆ ಗೀತೆ ಬರೆಯುವುದರ ಮೂಲಕ ಮಾಡುತ್ತಿರುವುದು ನಿಜಕ್ಕೂ ಅನುಕರಣೀಯ ಎಂದು ಅವರು ಹೇಳಿದರು.
ಲೇಖಕ ಕೆಂಪನಹಳ್ಳಿ ಚಂದ್ರಶೇಖರ್ ಮಾತನಾಡಿ ಆತ್ಮೀಯ ವಲಯದವರಿಗೆ ನಾಗರಾಜರಾವ್ ಕಲ್ಕಟ್ಟೆ, ಕೆ.ಎನ್.ನಾಗಭೂಷಣ್ ಹಾಗೂ ರೇಖಾನಾಗರಾಜರಾವ್ ಅವರು ಈ ಭಕ್ತಿಗೀತೆಯ ಸರಣಿ ಮೂಲಕ ವಾರ ವಾರ ಟೆಂಪಲ್ ರನ್ ಮಾಡಿಸುತ್ತಿರುವುದು ನಿಜಕ್ಕೂ ಖುಷಿಯೆನಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೋಡಿದಾಗ ಈ ಏಳು ತಿಂಗಳಲ್ಲಿ ಚಿಕ್ಕಮಗಳೂರಿನ ೩೧ ದೇವಾಲಯಗಳ ಕುರಿತು ಭಕ್ತಿ ಗೀತೆ ದೊರೆಯುತ್ತದೆ. ಇದು ನಿಜಕ್ಕೂ ಧಾರ್ಮಿಕ ರಂಗದ ಸಾಧನೆಯೇ ಸರಿ. ಇದು ಶತಕ ದಾಟಲಿ ಎಂದು ಶುಭ ಹಾರೈಸಿದರು.
ಹಿನ್ನೆಲೆ ಸಂಗೀತ ನೀಡಿದ ಕೆ.ಎನ್.ನಾಗಭೂಷಣ್ ನಮ್ಮೂರಿನ ದೇವಾಲಯಗಳಿಗೆ ಅವುಗಳದೇ ಆದ ಪರಂಪರಾಗತ ಆಚರಣೆಗಳಿವೆ. ಇಲ್ಲಿರುವ ಗೀತೆಗಳು ವಾರ್ಷಿಕ ಆಚರಣೆಗಳ ಬಗ್ಗೆಯೂ ಮಾಹಿತಿ ನೀಡುವುದಲ್ಲದೆ, ಇತಿಹಾಸವನ್ನು ಚಿಕ್ಕದಾಗಿ ಪರಿಚಯಿಸುವ ಕೆಲಸ ಮಾಡುತ್ತವೆ ಎಂದರು.
ಗಿಟಾರ್ ವಾದಕರಾದ ಜಯಂತಾಚಾರ್ ಮಾತನಾಡಿ ಮಧುವಂತಿ ರಾಗದಲ್ಲಿರುವ ಇಂದು ಬಿಡುಗಡೆಯಾದ ಗೀತೆಯು ಅತ್ಯಂತ ಸುಮಧುರವಾಗಿದೆ. ಸಾಹಿತ್ಯ, ಸಂಗೀತ, ಗಾಯನ ಎಲ್ಲ ರಂಗದಲ್ಲೂ ಈ ಗೀತೆ ಭಕ್ತಿಯ ಚೌಕಟ್ಟಿನಲ್ಲಿ ಯಶಸ್ವಿಯಾಗಿದೆ ಎಂದರು.
ಇದೇ ವೇಳೆ ನಿರ್ಮಾಪಕಿ, ಅ.ಭಾ.ಸಾ.ಪ ಸಾಂಸ್ಕöÈತಿಕ ಸಂಚಾಲಕಿ ರೇಖಾನಾಗರಾಜರಾವ್, ನಾಗರಾಜರಾವ್ ಕಲ್ಕಟ್ಟೆ, ನಾಗಭೂಷಣ್ ಕೆ.ಎನ್., ಜಯಂತ್ ಆಚಾರ್, ಕೆಂಪನಹಳ್ಳಿ ಚಂದ್ರಶೇಖರ್ ಅವರಿಗೆ ದೇವಾಲಯದ ಅನುಗ್ರಹ ಪ್ರಸಾದ ನೀಡಿ ಗೌರವಿಸಲಾಯಿತು.
ಹಿರಿಯ ಪುರೋಹಿತರಾದ ವಸಂತಭಟ್, ಕವಿತಾ, ನೇಕಾರಬೀದಿಯ ಶ್ರೀ ಕೋದಂಡ ರಾಮಸ್ವಾಮಿ ಸಂಘದ ಅಧ್ಯಕ್ಷರಾದ ರಾಮಣ್ಣ, ಅಂಚೆ ಇಲಾಖೆಯ ತಾರಾ ಮೊದಲಾದವರು ಉಪಸ್ಥಿತರಿದ್ದರು. ದೇವಾಲಯದ ಭಕ್ತವೃಂದದವರು ನಡೆಸಿದ ಅಷ್ಟೋತ್ತರ ನಾಮ ಸ್ಮರಣೆ ಆಕರ್ಷಣೀಯವಾಗಿತ್ತು.