ಹೈವೇ 40 ಮೀ. ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲ

MDG meeitng
ಹಳೇಮೂಡಿಗೆರೆ ಗ್ರಾಪಂನಲ್ಲಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಭೆ ನಡೆಯಿತು. ಸೋನಿಯಾ ಕ್ರಾಸ್ತಾ, ಜಾನಕಿ, ಜ್ಯೋತಿ ಸಾಲ್ದಾನಾ, ಪ್ರಶಾಂತ್ ಇತರರಿದ್ದರು.
Published on

ಮೂಡಿಗೆರೆ: ರಾಷ್ಟ್ರೀಯ ಹೆದ್ದಾರಿ 40 ಮೀ. ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸಿಕೊಳ್ಳುವಂತಿಲ್ಲ. ಕಟ್ಟಡ ರೇಖೆ ಮಾನದಂಡ ಉಲ್ಲಂಘನೆಯಾದರೆ ತೊಂದರೆಯಾಗುತ್ತದೆ. ಹಾಗಾಗಿ ತರಕಾರಿ ಅಂಗಡಿಯನ್ನು ತೆರವುಗೊಳಿಸುವುದು ಸೂಕ್ತ ಎಂದು ಹೆದ್ದಾರಿ ಪ್ರಾಧಿಕಾರದ ಸಹಾಯಕ ಅಭಿಯಂತರ ಶಶಿಕುಮಾರ್ ತಿಳಿಸಿದರು.

ತರಕಾರಿ ಅಂಗಡಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ತೊಂದರೆಯುಂಟಾಗುತ್ತದೆ ಎಂಬ ವೃದ್ಧೆಯ ದೂರಿನಂತೆ ಪರಿಶೀಲನೆಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ, ಹಳೇ ಮೂಡಿಗೆರೆ ಗ್ರಾಪಂ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದುದನ್ನು ನೋಡಿ ಅಲ್ಲಿಗೆ ಭೇಟಿ ನೀಡಿದರು. ಈ ವೇಳೆ ಗ್ರಾಪಂ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಪೊಲೀಸರು ಮತ್ತು ಗ್ರಾಮಸ್ಥರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, ಹೆದ್ದಾರಿಗೆ ತೊಂದರೆಯಾಗುವಂತಿದ್ದರೆ ತರಕಾರಿ ಅಂಗಡಿಯನ್ನು ತೆರವುಗೊಳಿಸಲಾಗುವುದು ಎಂದರು. ಆಗ ಸಭೆಯಲ್ಲಿ ಗೊಂದಲ ಸೃಷ್ಟಿಯಾಯಿತು.

ತರಕಾರಿ ಅಂಗಡಿಗೂ ರಾಷ್ಟ್ರೀಯ ಹೆದ್ದಾರಿಗೂ ಸಂಬಂಧವಿಲ್ಲ. ಸ್ಥಳೀಯ ಜಾಗದ ಮಾಲೀಕರಿಂದ ಬಾಡಿಗೆ ನೆಲೆಯಲ್ಲಿ ಜಾಗ ಪಡೆದು ತರಕಾರಿ ಅಂಗಡಿ ನಿರ್ಮಿಸಲಾಗಿದೆ. ಹೆದ್ದಾರಿಯ ಗಡಿ ರೇಖೆಯಿಂದ ಅಂಗಡಿ ದೂರದಲ್ಲಿದೆ. ನೀವು ತರಕಾರಿ ಅಂಗಡಿ ತೆರವುಗೊಳಿಸುವುದಾದರೆ ಹೆದ್ದಾರಿಯುದ್ದಕ್ಕೂ 40 ಮೀ. ವ್ಯಾಪ್ತಿಯೊಳಗೆ ಅಂಗಡಿಗಳಿವೆ. ಅವನ್ನೆಲ್ಲ ಮೊದಲು ತೆರವುಗೊಳಿಸಿ. ಹೆದ್ದಾರಿ ಅಲ್ಲಲ್ಲಿ ಗುಂಡಿಯಾಗಿ ಅಪಘಾತಗಳಾಗುತ್ತಿವೆ. ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆಗ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಾಪತ್ತೆಯಾಗಿರುತ್ತಾರೆ. ಹೆದ್ದಾರಿಗೆ ಸಂಬಂಧವಿಲ್ಲದ ಅಂಗಡಿಯನ್ನು ತೆರವುಗೊಳಿಸಲು ಬಂದಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಒಕ್ಕೊರಲಿನಿಂದ ಎಚ್ಚರಿಸಿದರು.

ಪಿಎಸ್‌ಐ ಶ್ರೀನಾಥ್ ರೆಡ್ಡಿ ಮಾತನಾಡಿ, ತರಕಾರಿ ಅಂಗಡಿ ತೆರವುಗೊಳಿಸುವಂತೆ ಅರ್ಜಿ ಬಂದಿರುವ ಕಾರಣ ಸ್ಥಳೀಯ ಗ್ರಾಪಂ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಂಗಡಿ ತೆರವುಗೊಳಿಸಲು ಮುಂದಾದರೆ ಅದಕ್ಕೆ ಪೊಲೀಸ್ ರಕ್ಷಣೆ ನೀಡಲಾಗುವುದು ಎಂದು ತಿಳಿಸಿದ್ದೇವೆ. ಅಂಗಡಿಯಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದಾದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ತಿಳಿಸಿದರು.

ಗ್ರಾಮಸ್ಥರ ಅಭಿಪ್ರಾಯ ಪಡೆದ ಅಧಿಕಾರಿಗಳು ತರಕಾರಿ ಅಂಗಡಿ ತೆರವು ಪ್ರಕ್ರಿಯೆ ಕೈಬಿಟ್ಟು, ಗ್ರಾಮಸ್ಥರು ಮತ್ತು ಗ್ರಾಪಂ ಚುನಾಯಿತ ಪ್ರತಿನಿಧಿಗಳಿಂದ ಪ್ರತ್ಯೇಕ ಮನವಿ ಸ್ವೀಕರಿಸಿ ತೆರಳಿದರು.

ಗ್ರಾಪಂ ಉಪಾಧ್ಯಕ್ಷೆ ಸೋನಿಯಾ ಕ್ರಾಸ್ತಾ, ಸದಸ್ಯರಾದ ಜುಬೇರ್, ಜಾನಕಿ, ಜ್ಯೋತಿ ಸಾಲ್ದಾನಾ, ಸಫಿಯಾ, ಪಿಡಿಒ ಪ್ರಶಾಂತ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಕಾಂಬಳೆ, ಹಿತರಕ್ಷಣಾ ಸಮಿತಿ ಅಧ್ಯಕ್ಷ ಆಯೂಬ್, ಎಲ್.ಬಿ.ರಮೇಶ್, ಎಂ.ಆರ್.ಜಗದೀಶ್, ಬಿ.ರುದ್ರಯ್ಯ, ನಂಜುಂಡ, ವಲಿಯಂ ಫೆರ್ನಾಂಡಿಸ್, ಯೂಸುಫ್, ಎಂ.ಆರ್.ಸತೀಶ್, ಯಾಕೂಬ್ ಗೋಣಿಗದ್ದೆ, ಅಬ್ದುಲ್ ರಜಾಕ್, ಲಕ್ಷ್ಮಣ ಪೂಜಾರಿ, ಮೊಹಮ್ಮದ್ ಹನೀಫ್ ಹೈದ್ರೋಸ್, ರಾಮು, ಸುಲೈಮಾನ್, ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net