ಹೈಮಾಸ್ಟ್ ದೀಪ ಅಳವಡಿಸಿ

sonare
Published on

ಬೀದರ್: ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಿಂದ ನೆಹರು ಕ್ರೀಡಾಂಗಣದ ರೋಟರಿ (ಕನ್ನಡಾಂಬೆ) ವೃತ್ತದವರೆಗೆ ಹೈಮಾಸ್ಟ್ ದೀಪಗಳನ್ನು ಅಳವಡಿಸುವಂತೆ ಜಾನಪದ ಕಲಾವಿದರ ಬಳಗದ ಜಿಲ್ಲಾಧ್ಯಕ್ಷ ವಿಜಯಕುಮಾರ ಸೋನಾರೆ ಆಗ್ರಹಿಸಿದ್ದಾರೆ.

ಸೋಮವಾರ ಅಪರ ಡಿಸಿ ರುದ್ರೇಶ ಘಾಳಿ ಅವರಿಗೆ ಭೇಟಿಯಾಗಿ ಈ ಕುರಿತು ಮನವಿಪತ್ರ ಸಲ್ಲಿಸಿ, ರಂಗಮಂದಿರದಿಂದ ರೋಟರಿ ವೃತ್ತದವರೆಗಿನ ರಸ್ತೆ ಬದಿಯ ಕಂಬಗಳಿಗೆ ಲೈಟ್ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ಹೊತ್ತು ಕಳ್ಳತನ ಪ್ರಕರಣಗಳು ಜರುಗುತ್ತಿವೆ. ಈ ರಸ್ತೆಯಲ್ಲಿ ಓಡಾಟಕ್ಕೆ ಹೆದರಿಕೆ ಬರುತ್ತಿದೆ ಎಂದು ಗಮನ ಸೆಳೆದಿದ್ದಾರೆ.

ರಾತ್ರಿ ವೇಳೆ ಕಲಾವಿದರು, ಸಾರ್ವಜನಿಕರು ಪೋನ್ ನಲ್ಲಿ ಮಾತನಾಡುತ್ತ ಹೋಗುತ್ತಿರುವ ಸಮಯದಲ್ಲಿ ಕಳ್ಳರು ಬೈಕ್ ಮೇಲೆ ವೇಗವಾಗಿ ಬಂದು ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಅಲ್ಲದೆ ಇಲ್ಲಿ ಲೈಟ್ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿಯಲ್ಲೇ ಕುಳಿತು ಕೆಲವರು ಮದ್ಯ ಸೇವನೆ ಮಾಡುತ್ತಿದ್ದು, ಅನೈತಿಕ ಘಟನೆಗಳಿಗೂ ಕಾರಣವಾಗುತ್ತಿದೆ. ಕೂಡಲೇ ಈ ಮಾರ್ಗದಲ್ಲಿ ಹೈಮಾಸ್ಟ್ ದೀಪ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮನವಿ ಪತ್ರ ಸ್ವೀಕರಿಸಿದ ರುದ್ರೇಶ ಘಾಳಿ, ಆದಷ್ಟು ಬೇಗೆ ಈ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net