ಹೈನೋದ್ಯಮದಿಂದ ರೈತರಲ್ಲಿ ಆರ್ಥಿಕ ಅಭಿವೃದ್ಧಿ; ಸಂಸದ ಬಚ್ಚೇಗೌಡ ಅಭಿಮತ; ಪಶು ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಚಾಲನೆ

13slb1
Published on

ಸೂಲಿಬೆಲೆ: ಗ್ರಾಮೀಣ ಭಾಗದಲ್ಲಿ ಪಶು ಸಂಗೋಪನೆ ಇಲಾಖೆ ಗ್ರಾಮೀಣ ಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಪೂರಕವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.

ಚೊಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಹುಲ್ಲೂರು ಬಳಿ ಶುಕ್ರವಾರ ಪಶು ಇಲಾಖೆಯಿಂದ 36 ಲಕ್ಷ ರೂ. ವೆಚ್ಚದ ಪಶು ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಬಹುಪಾಲು ರೈತರಿಗೆ ಪಶು ಸಂಗೋಪನೆ ಇಲಾಖೆ ಸ್ವಯಂ ಉದ್ಯೋಗ ಸೃಷ್ಟಿ ಜತೆಗೆ ಅರ್ಥಿಕವಾಗಿ ಸಬಲರಾನ್ನಾಗಿ ಮಾಡುವಲ್ಲಿ ನಿರಂತರ ಶ್ರಮಿಸುತ್ತಿದೆ. ರೈತರು ತಮಗೆ ಲಭ್ಯವಾಗುವ ಅಲ್ಪ ಬೆಳೆಯಲ್ಲಿ ಪಶು ಸಾಕಣೆ ಮಾಡಿ ಹೆಚ್ಚಿನ ಪ್ರಮಾಣದ ಹಾಲನ್ನು ಬಮುಲ್‌ಗೆ ಒದಗಿಸುವ ಮೂಲಕ ಆರ್ಥಿಕವಾಗಿ ಚೇತರಿಸಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದರು.

ಹಲವಾರು ದಶಕಗಳ ಹೋರಾಟದ ಫಲವಾಗಿ 14 ಗುಂಟೆ ಜಾಗದಲ್ಲಿ ಸುಸುಜ್ಜಿತ ಪಶು ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಸರ್ಕಾರ ಕೂಡ ಪಶು ಸಂಗೋಪನೆಯನ್ನು ಪ್ರೋತ್ಸಾಹಿಸಲು ಹಲವಾರು ಸೌಲಭ್ಯ ನೀಡುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಹಾಲಿನ ಬೇಡಿಕೆ ಕುಸಿದ ಸಂದರ್ಭದಲ್ಲೂ ಹೈನು ಸಾಕಣಿಕೆದಾರರಿಗೆ ಪ್ರೋತ್ಸಾಹ ಧನ ನೀಡಿದೆ. ಕರೊನಾ ಸೋಂಕು ಬಂದ ಚಿಕ್ಕಕೊರಟಿಯ ಹಾಲು ಉತ್ಪಾದಕರಿಗೆ ಕೆಎಂಎಫ್ ಹಾಗೂ ಸಂಘದ ಲಾಭಾಂಶದಲ್ಲಿ ಶೇ.70 ಸಹಾಯಧನ ನೀಡಿ ಹೈನು ಸಾಕಣೆದಾರರ ಕೈ ಹಿಡಿದಿದೆ ಎಂದರು.

ಬಮುಲ್ ನಿರ್ದೇಶಕ ಸಿ.ಮಂಜುನಾಥ್, ಪಶು ಇಲಾಖೆ ಜಿಲ್ಲಾ ಉಪನಿರ್ದೇಶಕ ಬಾಲಚಂದ್ರನ್, ಸಹಾಯಕ ನಿರ್ದೇಶಕ ಮಂಜುನಾಥ್, ಪಶು ವೈದ್ಯಾಧಿಕಾರಿ ಶಿಲ್ಪಾ, ಹಿರಿಯ ಪಶು ವೈದ್ಯ ಪರಿವೀಕ್ಷಕ ಸಿದ್ದ ಶೆಟ್ಟಿ, ತಾಪಂ ಸದಸ್ಯ ರಾಮೇಗೌಡ, ಗ್ರಾಪಂ ಅಧ್ಯಕ್ಷೆ ಲಲಿತಾ, ಸದಸ್ಯ ಚಿಕ್ಕಹುಲ್ಲೂರು ಬಚ್ಚೇಗೌಡ ಇದ್ದರು.

ನಗರೇನಹಳ್ಳಿ ಪಶು ಆಹಾರ ಘಟಕ: ಹೊಸಕೋಟೆ ತಾಲೂಕಿನ ನಗರೇನಹಳ್ಳಿ ಬಳಿಯ ಸರ್ವೇ ನಂಬರ್ 64ರಲ್ಲಿ ಪಶು ಆಹಾರ ಘಟಕ ಸ್ಥಾಪನೆ ಮಾಡಲು ಈಗಾಗಲೇ 20 ಎಕರೆ ಸ್ಥಳ ಮಂಜೂರಾಗಿದೆ. ಘಟಕ ಸ್ಥಾಪನೆಯಿಂದ 100 ಕೋಟಿ ಬಂಡವಾಳದ ವಹಿವಾಟು ನಡೆಯಲಿದ್ದು, ಈ ಭಾಗದ ಸಾವಿರಾರು ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಸಹ ಸಿಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net