ಹೈನೋದ್ಯಮದಿಂದ ಆರ್ಥಿಕ ಸ್ವಾವಲಂಬನೆ, ಬಮುಲ್ ನಿರ್ದೇಶಕ ಜಿ.ಆರ್.ಭಾಸ್ಕರ್ ಅಭಿಮತ, ದೊಡ್ಡಕರೇನಹಳ್ಳಿಯಲ್ಲಿ ಡೇರಿ ಕಟ್ಟಡ ಉದ್ಘಾಟನೆ

web 2
Published on

ನೆಲಮಂಗಲ: ಗ್ರಾಮೀಣ ಭಾಗದ ಜನರಿಗೆ ಹೈನುಗಾರಿಕೆ ಸಂಜೀವಿನಿಯಾಗಿದೆ ಎಂದು ಬಮುಲ್ ನಿರ್ದೇಶಕ ಜಿ.ಆರ್.ಭಾಸ್ಕರ್ ಅಭಿಪ್ರಾಯಪಟ್ಟರು.

ತಾಲೂಕಿನ ಯಂಟಗಾನಹಳ್ಳಿ ಗ್ರಾಪಂನ ದೊಡ್ಡಕರೇನಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಹೈನುಗಾರಿಕೆ ಅವಲಂಬಿತ ಕುಟುಂಬಗಳು ಸಮೃದ್ಧಿಯಾಗಿವೆ. ಯುವಜನತೆ ಉದ್ಯೋಗದೊಂದಿಗೆ ಹೈನುಗಾರಿಕೆ ಆರಂಭಿಸಿದರೆ ಆರ್ಥಿಕ ಸ್ವಾವಲಂಬನೆ ಜತೆಗೆ ಸಹಕಾರ ಸಂಘ ಉನ್ನತ ಸ್ಥಾನಕ್ಕೆ ಬೆಳೆಯುತ್ತದೆ. ರೈತರ ಸಹಕಾರದಿಂದ ತಾಲೂಕು ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಕಲ್ಪಿಸುವುದು ಪ್ರತಿಯೊಬ್ಬ ಜನಪ್ರನಿಧಿಗಳ ಕರ್ತವ್ಯವಾಗಿದೆ. 2 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕೆಲ ರಾಜಕೀಯ ವ್ಯಕ್ತಿಗಳು 12 ಲಕ್ಷ ರೂ. ವೆಚ್ಚ ಎಂದು ಬಿಲ್ ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.

ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪದವಿ ಪಡೆದ ಬಹುತೇಕ ಯುವಜನತೆ ನಿರುದ್ಯೊಗಿಗಳಾಗಿದ್ದಾರೆ. ಕೆಲವೇ ಮಂದಿ ಉದ್ಯೋಗಕ್ಕಾಗಿ ಕೈಗಾರಿಕೆಗಳನ್ನು ಅವಲಂಬಿಸಿದ್ದಾರೆ. ಆದರೆ ಅನೇಕ ಕಾರಣಗಳಿಂದ ಕೈಗಾರಿಕೆಗಳು ಮುಚ್ಚುತ್ತಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಯವಜನತೆ ಹೈನುಗಾರಿಕೆ ಆರಂಭಿಸಿದರೆ ಆರ್ಥಿಕವಾಗಿ ಸಬಲರಾಗಬಹುದು ಎಂದರು.

ಹಾಲು ಉತ್ಪಾದಕ ಸಹಕಾರ ಸಂಘಕಟ್ಟಡವನ್ನು ದೇವಾಲಯವೆಂದು ಭಾವಿಸಬೇಕಿದೆ. ಗುಣಮಟ್ಟದ ಹಾಲು ಉತ್ಪಾದನೆ ಮಾಡಿದರೆ ಅಧಿಕ ಲಾಭಗಳಿಕೆ ಜತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು ಎಂದರು.

ಹಾಲಿನ ಉತ್ಪನ್ನ ಕಾರ್ಖಾನೆ: ತಾಲೂಕಿನ ದಾಬಸ್‌ಪೇಟೆಯಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ನೂತನ ನಂದಿನಿ ಹಾಲಿನ ಉತ್ಪನ್ನ ತಯಾರಿಕೆಗೆ ಬೃಹತ್ ಕಾರ್ಖಾನೆಯನ್ನು ನಿರ್ಮಾಣ ಮಾಡಲು ಬಮುಲ್‌ನಿಂದ ಕೆಎಂಎಫ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರ್ಖಾನೆ ನಿರ್ಮಾಣವಾದಲ್ಲಿ ಗ್ರಾಮೀಣ ಭಾಗದ ಯುವರಿಗೆ ಉದ್ಯೋಗ ದೊರೆಯುತ್ತದೆ ಎಂದು ನಿರ್ದೇಶಕ ಜಿ.ಆರ್.ಭಾಸ್ಕರ್ ಮಾಹಿತಿ ನೀಡಿದ್ದರು.

ಬಮುಲ್ ನೆಲಮಂಗಲ ಶಿಬಿರ ಉಪವ್ಯವಸ್ಥಾಪಕ ಡಾ.ಎ.ಆರ್.ಗೋಪಾಲಗೌಡ, ವಿಸ್ತರಣಾಧಿಕಾರಿ ಎಚ್.ಎನ್.ಶ್ರುತಿ, ಮೇಲ್ವಿಚಾಲಕ ಟಿ.ಎಸ್.ರಮೇಶ್, ಗುರುವನಹಳ್ಳಿ ಡೇರಿ ಕಾರ್ಯದರ್ಶಿ ರಾಜಗೋಪಾಲ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ವಿ.ಪಟೇಲ್‌ವೆಂಕಟೇಶ್, ಗ್ರಾಪಂ ಮಾಜಿ ಸದಸ್ಯರಾದ ಕೋಡಪ್ಪನಹಳ್ಳಿ ವೆಂಕಟೇಶ್, ಉಮೇಶ್, ವಕೀಲ ಸಂಘದ ಅಧ್ಯಕ್ಷ ಸುರೇಶ್, ಸಂಘದ ಅಧ್ಯಕ್ಷ ಆರ್.ನಾಗರಾಜು, ಉಪಾಧ್ಯಕ್ಷ ಚಂದ್ರಶೇಖರಯ್ಯ, ನಿರ್ದೇಶಕರಾದ ಎನ್.ಕುಮಾರ್, ಸುರೇಶ್, ಜಿ.ಸಿದ್ದರಾಜು, ರಾಮಾಂಜನಯ್ಯ, ಮಿರ್ಜಾಬಾಷಸಾಬ್, ನಂಜುಂಡಪ್ಪ, ದೇವಿರಮ್ಮ, ಶಾರದಾ, ಮುಖ್ಯಕಾರ್ಯನಿರ್ವಾಹಕ ಗಂಗರಾಜು, ಹಾಲುಪರೀಕ್ಷಕ ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net