ಹೈದರ್ ಅಲಿ ರಸ್ತೆ ವಿಸ್ತರಣೆ ಕಾಮಗಾರಿ ಖಂಡಿಸಿ ಪ್ರತಿಭಟನೆ

mysore
Published on

ಮೈಸೂರು: ನಜರ್‌ಬಾದ್‌ನ ಹೈದರ್ ಅಲಿ ರಸ್ತೆ ವಿಸ್ತರಣೆ ಕಾಮಗಾರಿ ಖಂಡಿಸಿ ಪರಿಸರ ಉಳಿವಿಗಾಗಿ ಕ್ರಿಯಾ ಸಮಿತಿಯ ಸುಮಾರು 200 ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಇದರ ಫಲವಾಗಿ ಕೆಲ ಹೊತ್ತು ಕಾಮಗಾರಿ ಸ್ಥಗಿತಗೊಳಿಸಲಾಯಿತು. ಆರು ತಿಂಗಳೊಳಗೆ ರಸ್ತೆಯಲ್ಲಿ ಮರ ನೆಡಲಾಗುವುದು ಎಂದು ಲಿಖಿತ ಭರವಸೆಯನ್ನು ಪಾಲಿಕೆಯಿಂದ ಪಡೆದುಕೊಳ್ಳಲಾಯಿತು.

ಏಪ್ರಿಲ್ 12ರಂದು 40 ಮರಗಳನ್ನು ಕಡಿಯಲಾಗಿತ್ತು. ಈ ಕುರಿತು ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ದಿಢೀರ್ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಇದಕ್ಕೆ ಆಕ್ಷೇಪಿಸಿದ ಸಮಿತಿಯ ಕಾರ್ಯಕರ್ತರು ರಸ್ತೆಯ ಬದಿಯಲ್ಲಿ ಗಿಡಗಳನ್ನು ನೆಟ್ಟ ನಂತರವಷ್ಟೇ ಕಾಮಗಾರಿ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಮಧುಸೂದನ್ ಅವರು, ರಸ್ತೆ ವಿಸ್ತರಣೆ ಕೆಲಸವನ್ನು 20 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದ್ದರು. ಈಗಾಗಲೇ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ವಿಸ್ತರಣೆ ಕಾರ್ಯ ಆರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ರಸ್ತೆಯ ಬಲ ಮತ್ತು ಎಡ ಮಾರ್ಗಗಳಲ್ಲಿ 150 ಸಸಿಗಳನ್ನು ನೆಡಲಾಗುವುದು ಎಂದು ಲಿಖಿತ ಭರವಸೆ ನೀಡಿದರು.

ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಸಮಿತಿಯ ಪರಶುರಾಮೇಗೌಡ, ಕಮಲ್ ಗೋಪಿನಾಥ್, ಕಾಮಾಕ್ಷಿ ಗೌಡ, ಸ್ಮಿತಾ, ಲೀಲಾ ವೆಂಕಟೇಶ್, ಲೀಲಾ ಶಿವಕುಮಾರ್, ಕಿರಣ್ ಕುಮಾರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net