ಹೈದರಾಬಾದ್​ನಲ್ಲಿ ರೋಡ್ ಶೋ

h29-joshi 2
Published on

ಹುಬ್ಬಳ್ಳಿ: ಉತ್ತರ ಕರ್ನಾಟಕ ಹಾಗೂ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಆಕರ್ಷಿಸಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಹೈದರಾಬಾದ್​ನಲ್ಲಿ ರೋಡ್ ಶೋ ಹಾಗೂ ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ಬುಧವಾರ ಸರಣಿ ಸಭೆ ನಡೆಯಿತು. ಫೆ. 14ರಂದು ಹುಬ್ಬಳ್ಳಿಯಲ್ಲಿ ‘ಇನ್​ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ’ ನಡೆಯಲಿದ್ದು, ಉದ್ಯಮಿಗಳನ್ನು ಆಹ್ವಾನಿಸಲಾಯಿತು.

ಡಾ. ರೆಡ್ಡಿ ಲ್ಯಾಬ್​ಗೆ ಭೇಟಿ ನೀಡಿದ ಸಚಿವದ್ವಯರು, ಕಂಪನಿ ಉಪಾಧ್ಯಕ್ಷ ಜಿ.ವಿ. ಪ್ರಸಾದ್ ಅವರೊಂದಿಗೆ ಉತ್ತರ ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ರ್ಚಚಿಸಿದರು. ನಂತರ ಆಲ್ಪಾ ಪ್ಯಾಕೇಜಿಂಗ್​ಗೆ ಭೇಟಿ ನೀಡಿದ ಸಚಿವರನ್ನೊಳಗೊಂಡ ನಿಯೋಗ, ಕಂಪನಿಯ ಭಾರತ ದೇಶದ ವ್ಯವಹಾರಗಳ ಮುಖ್ಯಸ್ಥ ವಾಗೀಶ ದೀಕ್ಷಿತ ಅವರೊಂದಿಗೆ ಮಾತುಕತೆ ನಡೆಸಿತು.

ಜಿವಿಕೆ ಗ್ರುಪ್, ಆರ್​ಎ ಇನ್​ಫ್ರಾಸ್ಟ್ರಕ್ಚರ್ ಪ್ರೖೆವೇಟ್ ಲಿಮಿಟೆಡ್​ನ ಮುಖಂಡರನ್ನು ಭೇಟಿ ಮಾಡಿದರು. ದೊಡ್ಲಾ ಡೇರಿಯ ಮಧುಸೂದನ ರೆಡ್ಡಿ, ಕೆಎನ್ ಗ್ರುಪ್ ಆಫ್ ಕಂಪನಿ, ಕೋಮಲ್ ಆಗ್ರೋಟೆಕ್ ಪ್ರೖೆವೇಟ್ ಲಿಮಿಟೆಡ್, ಭಾರತ್ ಬಯೋಟೆಕ್, ಕ್ರೇನ್ ಬಯೋಟೆಕ್ ಸೇರಿ 20ಕ್ಕೂ ಹೆಚ್ಚು ಕಂಪನಿಗಳ ಮುಖ್ಯಸ್ಥರನ್ನು ಸಚಿವದ್ವಯರು ಭೇಟಿ ಮಾಡಿ ರ್ಚಚಿಸಿದರು.

ಸಂಜೆ 6ರಿಂದ ಆರಂಭಗೊಂಡ ರೋಡ್ ಶೋ ರಾತ್ರಿ 9ಕ್ಕೆ ಮುಕ್ತಾಯಗೊಂಡಿತು. ನಂತರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಬಹುತೇಕ ಉದ್ಯಮಿಗಳು ಧನಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕದ ಪಾಲು ಹೆಚ್ಚಿದೆ. ಹು-ಧಾ ಕರ್ನಾಟಕದ ಉನ್ನತ ಕೈಗಾರಿಕಾ ತಾಣವಾಗಲು ಸೂಕ್ತ ವಾತಾವರಣ ಹೊಂದಿದೆ. ಉತ್ತಮ ರೈಲ್ವೆ, ರಸ್ತೆ, ವಾಯುಯಾನ ಸಂಪರ್ಕ, ಮೂಲ ಸೌಕರ್ಯ, ಲಾಜಿಸ್ಟಿಕ್ ಬೆಂಬಲ, ಟೆಲಿ ಸಂವಹನ ಜಾಲ ಇದೆ ಎಂದು ಉದ್ಯಮಿಗಳಿಗೆ ಮಾಹಿತಿ ನೀಡಿದರು.

3 ಸಾವಿರ ಎಕರೆ ಭೂಸ್ವಾಧೀನ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಇತ್ತೀಚೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ದಾವೋಸ್​ಗೆ ತೆರಳಿ ಇನ್​ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದ ಕರ್ಟನ್ ರೈಸರ್ ಕಾರ್ಯಕ್ರಮ ನೆರವೇರಿಸಿದ್ದು, ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಲಾಗಿದೆ. ಕರ್ನಾಟಕದ 2 ಮತ್ತು 3 ಟೈರ್ ನಗರಗಳಲ್ಲಿ ಹೂಡಿಕೆಗೆ ಆಕರ್ಷಿಸಲು ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಕೈಗಾರಿಕಾ ಅಭಿವೃದ್ಧಿಗೆ ಅನುಕೂಲಕರ ವಾತಾವರಣವಿದೆ. ಸುಮಾರು 5400 ಎಕರೆ ವಿಸ್ತೀರ್ಣದ ಲ್ಯಾಂಡ್ ಬ್ಯಾಂಕ್ ರಚಿಸಲಾಗಿದೆ. ಹು-ಧಾ ಅವಳಿ ನಗರದಲ್ಲಿ ಸುಮಾರು 3 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ ಎಂದರು.

ರೋಡ್​ಶೋನಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ಸಂಸದರಾದ ಉಮೇಶ ಜಾಧವ, ಭಗವಂತ ಖೂಬಾ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಇನ್​ವೆಸ್ಟ್ ಕರ್ನಾಟಕ ಫೋರಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪ ಟಿ.ಕೆ., ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net