ಹೈದರಾಬಾದ್‌ನ ಸೌತ್‌ಸೆಂಟ್ರಲ್ ರೈಲ್ವೆ ತಂಡಕ್ಕೆ ಒಕ್ಕಲಿಗರ ಕಪ್

6spt1
Published on

ಸೋಮವಾರಪೇಟೆ: ಒಕ್ಕಲಿಗರ ಯುವ ವೇದಿಕೆ ಸೋಮವಾರಪೇಟೆ, ಅಮೇಚೂರ್ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಮತ್ತು ಕೊಡಗು ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯ ಪ್ರತಿಷ್ಠಿತ ಒಕ್ಕಲಿಗರ ಕಪ್ ಅನ್ನು ಹೈದರಾಬಾದ್‌ನ ಸೌತ್‌ಸೆಂಟ್ರಲ್ ರೈಲ್ವೆ ತಂಡ ಮುಡಿಗೇರಿಸಿಕೊಂಡಿತು.


ಕರ್ನಾಟಕ ಇಲೆವೆನ್ ತಂಡ ರನ್ನರ್‌ಆಫ್ ಆಯಿತು. ರಾತ್ರಿ 11.30ಕ್ಕೆ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ 44-30 ಅಂಕಗಳಲ್ಲಿ ಗೆಲುವು ಸಾಧಿಸಿದ ತಂಡ 2 ಲಕ್ಷ ರೂ. ನಗದು ಹಾಗೂ ಅಕರ್ಷಕ ಟ್ರೋಪಿ ಪಡೆಯಿತು. ಕರ್ನಾಟಕ ತಂಡ 1 ಲಕ್ಷ ರೂ. ನಗದು ಟ್ರೋಪಿ ತನ್ನದಾಗಿಸಿಕೊಂಡಿತು. ದ್ವೀತಿಯ ಬಹುಮಾನವನ್ನು ಮುಂಬೈ ಯುವ ಪಲ್ಟನ್, ನಾಲ್ಕನೇ ಬಹುಮಾನವನ್ನು ಹರ‌್ಯಾಣ ತಂಡ ಪಡೆಯಿತು.


ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ಬ್ಯಾಂಕ್ ಆಫ್ ಬರೋಡ ತಂಡವನ್ನು, ಮುಂಬೈನ ಯುವ ಪಲ್ಟನ್ ತಂಡ 36-32 ಅಂಕಗಳಿಂದ ಸೋಲಿಸಿ ಸೆಮಿಫೈನಲ್‌ಗೇರಿತು. ಸೌತ್‌ಸೆಂಟ್ರಲ್ ರೈಲ್ವೆ ತಂಡ, ಏರ್‌ಇಂಡಿಯಾ ತಂಡದ ವಿರುದ್ಧ 38-16ರಲ್ಲಿ ಗೆಲುವು ದಾಖಲಿಸಿತು. ಹರ‌್ಯಾಣ ಎನ್‌ಯುಎಸ್‌ಸಿ ತಂಡ, ತಮಿಳುನಾಡಿನ ದೊರೆ ಸಿಗಂ ತಂಡವನ್ನು 42-35 ಅಂಕಗಳಿಂದ ಮಣಿಸಿತು. ಕರ್ನಾಟಕ ಇಲೆವೆನ್ ತಂಡ, ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು 34-25 ಅಂಕಗಳಿಂದ ಸೋಲಿಸಿತು.
ಮೊದಲ ಸೆಮಿಫೈನಲ್‌ನಲ್ಲಿ ಕರ್ನಾಟಕ ಇಲೆವೆನ್ ತಂಡ, ಮುಂಬೈ ಯುವ ಪಲ್ಟನ್ ತಂಡವನ್ನು 30-29 ಅಂಕಗಳಿಂದ ಸೋಲಿಸಿ ಫೈನಲ್‌ಗೇರಿತು. ಎರಡನೇ ಸೇಮಿಸ್‌ನಲ್ಲಿ ಹರ‌್ಯಾಣ ಎನ್‌ಯುಎಸ್‌ಸಿ ತಂಡವನ್ನು ಸೌತ್‌ಸೆಂಟ್ರಲ್ ರೈಲ್ವೆ ತಂಡ 38-19 ಸೋಲಿಸಿ, ಫೈನಲ್ ತಲುಪಿತು.

ಮಾಜಿ ಸಚಿವ ಬಿ.ಎ.ಜೀವಿಜಯ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ, ತಾಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಬಿ.ಸುರೇಶ್, ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಬಿ.ಸಿ.ಸುರೇಶ್, ಜಿಲ್ಲಾ ಅಧ್ಯಕ್ಷ ಎಚ್.ಎಸ್.ಉತ್ತಪ್ಪ ಪ್ರಮುಖರಾದ ಡಾ.ಮಂತರ್‌ಗೌಡ, ಹರೀಶ್‌ಗೌಡ, ಎಸ್.ಜಿ.ಮೇದಪ್ಪ, ಬಿ.ಜೆ.ದೀಪಕ್, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಶುಂಠಿ ನಾಗಭೂಷಣ್, ಕಿರಣ್ ಕೊತ್ನಳ್ಳಿ, ಪಿ.ಕೆ.ರವಿ ಮತ್ತಿತರ ಗಣ್ಯರು ಸಮಾರೋಪ ಸಮಾರಂಭದಲ್ಲಿ ಇದ್ದರು. ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತ ಬಿ.ಸಿ.ಸುರೇಶ್, ಕಿರಿಯ ಹಾಕಿ ಆಟಗಾರರಾದ ಹಾನಗಲ್ಲು ಗ್ರಾಮದ ಕೆ.ಸಿ.ಭುವನ್, ಹೆಗ್ಗುಳ ಗ್ರಾಮದ ವಿ.ವೈ.ಶಶಿತ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net