

ಯಾದಗಿರಿ: ಒಂದು ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಸುಮಾರು ೨೫ ಲಕ್ಷ ರೂ. ಖರ್ಚು ಮಾಡಿದರೂ ಅಲ್ಲಿ ವಿದ್ಯುತ್, ಸುತ್ತುಗೋಡೆ, ನೀರು ಸೇರಿ ಇತರೆ ಸೌಲಭ್ಯಗಳೇ ಇಲ್ಲ. ಇದೆಂತಹ ಯೋಜನೆ, ಕೇವಲ ಶೌಚಗೃಹ ಕಟ್ಟಿದರೆ ಮುಗಿತೇ? ಅಲ್ಲಿ ಮೂಲಭೂತ ಸೌಲಭ್ಯ ಯಾರು ಒದಗಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಗುರುಮಠಕಲï ಮತಕ್ಷೇತ್ರದ ಕಾಳಬೆಳಗುಂದಿಯಲ್ಲಿ ನಡೆಯುತ್ತಿರುವ ಹೈಟೆಕ್ ಶೌಚಗೃಹ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಅಲ್ಲಿನ ಕಳಪೆ ಕಾಮಗಾರಿ ಕಣ್ಣಾರೇ ಕಂಡು ದಂಗಾಗಿ ಯಾವ ಪುರುಷಾರ್ಥಕ್ಕಾಗಿ ಹೈಟೆಕ್ ಶೌಚಗೃಹ ಕಟ್ಟುತ್ತಿದ್ದಿರಿ, ಇದು ಗುಣಮಟ್ಟದ ಕಾಮಗಾರಿಯೇ ಅಲ್ಲ. ಸಾರ್ವಜನಿಕರು ನಿತ್ಯ ಈ ಬಗ್ಗೆ ದೂರು ನೀಡುತ್ತಿದ್ದಾರೆ. ಸರ್ಕಾರದ ಹಣ ಪೊಲು ಮಾಡಲು ಕಟ್ಟುತ್ತಿದ್ದಿರೇನು ಎಂದು ಪ್ರಶ್ನಿಸಿದರು.
ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಈ ಹೈಟೆಕ್ ಶೌಚಗೃಹ ನಿರ್ಮಾಣಕ್ಕಾಗಿ ಬುನಾದಿ ಹಂತದವರೆಗೆ ಕೆಆರ್‌ಡಿಎಲï ಸರ್ಕಾರಿ ಸಂಸ್ಥೆ ನೀಡಲಾಗಿದ್ದು, ಸರ್ಕಾರದ ನಿಯಮ ಮೀರಿ ಕೆಟಿಪಿ ಆಕ್ಟ್ ಮೀರಿ ಎಎಚ್‌ಐಆರ್‌ಐ ಕೊಲೆಬ್ರೇಟಿವ್ ಎಲ್‌ಎಲ್‌ಪಿ ಎಂಬ ಖಾಸಗಿ ಕಂಪನಿಗೆ ನೀಡಲಾಗಿದೆ.
ಆದರೆ ಕಾಮಗಾರಿ ಸಂಪೂರ್ಣ ಕಳೆಪೆಯಾಗಿದ್ದು, ಇದರಲ್ಲಿ ಭ್ರಷ್ಟಾಚಾರ ನಡೆದಿದ್ದು, ಯಾರೋ ಪ್ರಭಾವಿಗಳ ಒತ್ತಡಕ್ಕಾಗಿ ಅಥವಾ ಭ್ರಷ್ಟಾಚಾರಕ್ಕೊಳಗಾಗಿ ಹೈಟೆಕ್ ಶೌಚಗೃಹ ಕಾಮಗಾರಿ ನಿರ್ಮಾಣ ಈ ಕಂಪನಿಗೆ ಸರ್ಕಾರದ ನಿಯಮ ಮೀರಿ ನೀಡಲಾಗಿದೆ ಎಂದು ಶಾಸಕ ಕಂದಕೂರ ಆರೋಪಿಸಿದರು.
ಹೈಟೆಕ್ ಶೌಚಗೃಹ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ತನಿಖೆ ನಡೆಸುವಂತೆ ಸಿಎಂ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒತ್ತಾಯಿಸುವುದಾಗಿ ಶಾಸಕರು ಹೇಳಿದರು. ಈ ವೇಳೆ ಅಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಖಾಸಗಿ ಕಂಪನಿ ನೌಕರರು ಇದ್ದರು.