

ಹುಮನಾಬಾದ್: ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾದರಿಯಾಗಿ ನಿರ್ಮಿಸಿರುವ ಸುಸಜ್ಜಿತ ತಾಪಂ ಕಚೇರಿ ನೂತನ ಕಟ್ಟಡ ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.
ಶಾಸಕ ರಾಜಶೇಖರ ಪಾಟೀಲ್ ಅವರ ವಿಶೇಷ ಕಾಳಜಿಯಿಂದಾಗಿ ಹಿಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು ಹೈಟೆಕ್ ತಾಪಂ ಕಟ್ಟಡ ಕಾಮಗಾರಿಗೆ 1.30 ಕೋಟಿ ರೂ. ಮಂಜೂರಿ ಮಾಡಿದ್ದರು. ಎರಡು ವರ್ಷದೊಳಗೆ ಕೆಲಸ ಪೂರ್ಣಗೊಂಡಿದೆ. ಅಧ್ಯಕ್ಷ, ಉಪಾಧ್ಯಕ್ಷ, ಇಒ ಹಾಗೂ ಎಲ್ಲ ವಿಭಾಗದ ಅಧಿಕಾರಿ, ಸಿಬ್ಬಂದಿಗೆ ಪ್ರತ್ಯೇಕ ಕೋಣೆ ಸೇರಿ ಕಟ್ಟಡದಲ್ಲಿ ಕೆಲಸ ನಿರ್ವಹಿಸಲು ಉತ್ತಮ ವ್ಯವಸ್ಥೆ ಮಾಡಲಾಗಿದೆ. ತಾಪಂ ಆವರಣದಲ್ಲಿ ಈಗಾಗಲೇ ಸಿಸಿ ರಸ್ತೆ ಮಾಡಿದ್ದು, ಸುಂದರ ಉದ್ಯಾನವನದ ಕಾಮಗಾರಿ ಭರದಿಂದ ಸಾಗಿದೆ.
ಮಂಗಳವಾರ ಶಾಸಕ ರಾಜಶೇಖರ ಪಾಟೀಲ್ ಅವರು ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿ, ಸಕಲ ಸೌಲಭ್ಯಗಳನ್ನು ಹೊಂದುವ ಜತೆಗೆ ಸುಂದರ ಕಟ್ಟಡ ನಿರ್ಮಿಸಲಾಗಿದೆ. ಈ ಭಾಗದ ಜಿಲ್ಲೆಗಳಲ್ಲಿ ಹೈಟೆಕ್ ವ್ಯವಸ್ಥೆಯುಳ್ಳ ಮೊದಲ ತಾಪಂ ಕಚೇರಿ ಎಂಬ ಹೆಗ್ಗಳಿಕೆ ಹೊಂದಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ರಮೇಶ ಡಾಕುಳಗಿ ಮಾತನಾಡಿ, ಶಾಸಕರ ಕಾಳಜಿಯಿಂದ ಅನುದಾನ ಲಭ್ಯವಾಗಿ ನಿಗದಿತ ಕಾಲ ಮಿತಿಯಲ್ಲಿ ಕೆಲಸ ಮುಗಿದಿದೆ. ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಮಾಡುತ್ತಿರುವ ಕೆಲಸಗಳು ಮಾದರಿಯಾಗಿವೆ. ವಿವಿಧ ಸೌಲಭ್ಯಗಳುಳ್ಳ ತಾಪಂ ಕಟ್ಟಡದಲ್ಲಿ ಎಲ್ಲರೂ ಒಂದೆಡೆ ಸೇರಿ ಆಡಳಿತ ನಡೆಸುವ ವ್ಯವಸ್ಥೆ ಸಹಕಾರಿಯಾಗಲಿದೆ. ಐದು ವರ್ಷ ಅಧ್ಯಕ್ಷನಾಗಿ ಕೆಲಸ ಮಾಡಲು ಸಿಕ್ಕ ಅವಕಾಶದಲ್ಲಿ ಶಾಸಕರ ನೇತೃತ್ವದಲ್ಲಿ ಕೈಲಾದಷ್ಟು ಅಭಿವೃದ್ಧಿಗೆ ಶ್ರಮಿಸಿರುವೆ ಎಂದರು.
ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್, ಜಿಪಂ ಸದಸ್ಯೆ ಭಾರತಬಾಯಿ, ತಾಪಂ ಉಪಾಧ್ಯಕ್ಷೆ ಸುಗಂಧ, ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ಚಿಟಗುಪ್ಪ ತಾಪಂ ಅಧ್ಯಕ್ಷ ಬೀರಪ್ಪ, ಉಪಾಧ್ಯಕ್ಷೆ ನಿರ್ಮಲಾ ಮಳ್ಳಿ, ಟಿಎಪಿಎಸ್ಎಂಸಿ ಅಧ್ಯಕ್ಷ ಅಭಿಷೇಕ ಪಾಟೀಲ್, ಪುರಸಭೆ ಅಧ್ಯಕ್ಷೆ ಕಸ್ತೂರಿಬಾಯಿ, ಮಹಾಂತಯ್ಯ ತೀರ್ಥ, ಪ್ರಮುಖರಾದ ವೀರಣ್ಣ ಪಾಟೀಲ್, ಮಲ್ಲಿಕಾರ್ಜುನ ಮಾಶೆಟ್ಟಿ, ಭದ್ರೇಶ ಪಾಟೀಲ್, ಶ್ರೀಮಂತ ಪಾಟೀಲ್, ರಾಮರಾವ, ರಘುನಾಥ ಘಂಟೆ, ನವಲಿಂಗ ಪಾಟೀಲ್, ಮಂಗಲಾ ಭಾಗವತ್, ದಯಾನಂದ ಲಾಖೆ ಇತರರಿದ್ದರು.
ವಸತಿಗೃಹಕ್ಕೆ ರು.1.50 ಕೋಟಿ
ತಾಪಂ ಅಧಿಕಾರಿ ಹಾಗೂ ಸಿಬ್ಬಂದಿಗಳಿಗಾಗಿ ವಸತಿಗೃಹಗಳ ನಿರ್ಮಾಣಕ್ಕೆ ಸರ್ಕಾರದಿಂದ 1.5 ಕೋಟಿ ರೂ. ಅನುದಾನ ಮಂಜೂರಿ ಆಗಿದೆ ಎಂದು ಶಾಸಕ ರಾಜಶೇಖರ ಪಾಟೀಲ್ ತಿಳಿಸಿದರು. ಶೀಘ್ರ ಈ ಕಾಮಗಾರಿ ಆರಂಭ ಮಾಡಲಾಗುವುದು. ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರದ ಸೌಲಭ್ಯ ಪಡೆದು ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ವಿವಿಧ ಸೌಲಭ್ಯ ನೇರ ಫಲಾನುಭವಿಗಳಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಬೇಕು ಎಂದು ಸೂಚಿಸಿದರು.
ಇಲ್ಲಿವೆ ಸಕಲ ಸೌಲಭ್ಯ
3 ಸಾವಿರ ಚದರ ಅಡಿಯಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ. ನೆಲ ಮಹಡಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಕೋಣೆ, ತಾಂತ್ರಿಕ ಕಾರ್ಯನಿರ್ವಹಣೆ ಕೋಣೆ ನಿರ್ಮಿಸಲಾಗಿದೆ. ಮೊದಲ ಮಹಡಿಯಲ್ಲಿ ಯೋಜನೆ ಅಧಿಕಾರಿ, ಸಹಾಯಕ ನಿರ್ದೇಶಕರು, ಲೆಕ್ಕ ಪರಿಶೋಧಕರು, ವ್ಯವಸ್ಥಾಪಕರು ಸೇರಿದಂತೆ ಸಿಬ್ಬಂದಿ ಕೋಣೆಗಳಿವೆ. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ನಿರ್ಮಿಸಲಾಗಿದೆ.