

ಹಾಸನ: ಹೈಕೋರ್ಟ್‌ನಿಂದ ನನಗೆ ಯಾವುದೇ ಸಮನ್ಸ್ ಬಂದಿಲ್ಲ. ಬಂದರೆ ಸ್ವೀಕರಿಸುವೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಹೊಳೆನರಸೀಪುರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮನ್ಸ್ ವಿಚಾರವೇ ನನಗೆ ಗೊತ್ತಿಲ್ಲ. ಸಮನ್ಸ್ ಬಂದರೆ ನಮ್ಮ ವಕೀಲರ ಮೂಲಕ ಉತ್ತರ ಕೊಡುತ್ತೇನೆ. ನಾನು ಅದರ ಬಗ್ಗೆ ಇವತ್ತೇನು ಮಾತನಾಡುವುದಿಲ್ಲ. ನನ್ನ ಮೇಲೆ ಯಾವುದೇ ಹೊಸ ಕೇಸ್ ಇಲ್ಲ. ನ್ಯಾಯಾಲಯದ ತೀರ್ಪಿಗೆ ನಾವು ತಲೆ ಬಾಗುತ್ತೇವೆ ಎಂದರು.
ನಮ್ಮ ಕುಟುಂಬದ ಮೇಲೆ ಕೋರ್ಟ್‌ನಲ್ಲಿ ಸಾಕಷ್ಟು ಪ್ರಕರಣ ದಾಖಲಿಸಿದ್ದಾರೆ. ಇವತ್ತೇನು ಹೊಸದಾ ಇದು, ಯಾರು ಎಷ್ಟು ಕೇಸ್ ಹಾಕಿದದರು ಎಂದು ಸಮಯ ಬಂದಾಗ ಹೇಳುತ್ತೇನೆ. ಇಡೀ ರಾಜ್ಯದಲ್ಲಿ ಯಾರಾದರೂ ಲೋಕಾಯುಕ್ತ ಮುಂದೆ ಹೋಗಿ ಎದುರಿಸಿದ್ದರೆ ಅದು ದೇವೇಗೌಡರ ಕುಟುಂಬ ಮಾತ್ರ. ಈಗ ಎಲೆಕ್ಷನ್ ಪಿಟಿಷನ್ ಹಾಕಿದ್ದಾರೆ. ಬಂದರೆ ನಮ್ಮ ವಕೀಲರ ಮುಖಾಂತರ ನೋಟೀಸ್ ತಗೋತಿವಿ. ವಕೀಲರ ಮೂಲಕವೇ ಉತ್ತರ ನೀಡುತ್ತೇವೆ. ಯಾರೇ ಟಾರ್ಗೆಟ್ ಮಾಡಿದರೂ ಹೆದರಿಕೊಂಡು ಓಡಿ ಹೋಗಲ್ಲ ಎಂದು ತಿರುಗೇಟು ನೀಡಿದರು.
ಹಿಂದಿನಿಂದಲೂ ಇಂತಹದ್ದನ್ನೆಲ್ಲಾ ನೋಡಿ ಬಿಟ್ಟಿದ್ದೀನಿ. ನ್ಯಾಯಾಲಯದ ಬಗ್ಗೆ ನನಗೆ ಗೌರವವಿದೆ. ಸಿದ್ದರಾಮಯ್ಯ ಅವರ ಮೇಲೆ ಹಾಕಿದ್ದಾರೆ, ಅದರಲ್ಲಿ ನಂದೂ ಒಂದು.ಎಲೆಕ್ಷನ್ ಪಿಟಿಷನ್‌ನಲ್ಲಿ ನನ್ನದೇನಿದೆ ಪಾತ್ರ. ನಾನು ಎಲ್ಲಾದರೂ, ಯಾವುದಾದರೂ ಬೂತ್‌ಗೆ ಹೋಗಿದ್ದೀನಾ ಎಂದು ಪ್ರಶ್ನಿಸಿದ ಅವರು, ಇವೆಲ್ಲವನ್ನೂ ಹೆದರಿಸಿಯೇ ರಾಜಕೀಯದಲ್ಲಿರೋದು, ಆರು ಬಾರಿ ಎಂಎಲ್‌ಎ ಆಗಿರೋದು, ಎರಡೂ ರಾಷ್ಟ್ರೀಯ ಪಕ್ಷಗಳನ್ನು ಎದುರಿಸಿ ಉಳಿದುಕೊಂಡಿದ್ದೇವೆ ಎಂದು ಹೇಳಿದರು.
ವಕೀಲರ ಜೊತೆಗೆ ಚರ್ಚೆ:
ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಂಬಂಧ ಪ್ರಜ್ವಲ್ ಅವರು ವಕೀಲರ ಜೊತೆ ಮಾತಾಡುತ್ತಿದ್ದಾರೆ. ನಮ್ಮ ಕುಟುಂಬ ಹೋರಾಟದಿಂದಲೇ ಬಂದಿರೋದು. ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ಪಕ್ಷ ಮುಗಿಸಲೇಬೇಕು ಎಂದು ಹೊರಟಿದ್ದಾರೆ, ಸುಪ್ರೀಂಕೋರ್ಟ್‌ನಲ್ಲಿ ಏನಾಗುತ್ತೆ ಎಂದು ಮುಂಚಿತವಾಗಿ ನಾನೇನು ಹೇಳಲಿ. ನಮ್ಮ ಜೀವನದಲ್ಲಿ ನಾವು ಯಾವ ಆಸ್ತಿನೂ ಮುಚ್ಚಿಟ್ಟಿಲ್ಲ. ಕಾನೂನು ಏನಿದೆ ಅದನ್ನ ಪ್ರಜ್ವಲ್ ಮಾಡುತ್ತಾರೆ ಎಂದರು.