

ಹಾಸನ: ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರಿಗೆ ಪಕ್ಷ ಮತ್ತು ಹೈಕಮಾಂಡ್ ಬಗ್ಗೆ ಗೌರವವಿದೆ ಅದನ್ನ ಪೂಜ್ಯ ಭಾವನೆಯಿಂದ ನೋಡುತ್ತೇವೆ. ಆದರೆ, ಹೈಕಮಾಂಡ್‌ಗೆ ಗೌರವ ಕೊಡುವುದಿಲ್ಲ ಎನ್ನುವ ಮನಸ್ಥಿತಿ ಇರುವವರು ನಮಗೆ ಗೌರವ ಕೊಡುತ್ತಾರೆ ಎಂದು ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಮತ್ತೆ ಮಾಜಿ ಸಚಿವ ಬಿ.ಶಿವರಾಂ ವಾಗ್ದಾಳಿ ನಡೆಸಿದರು.
ಪಕ್ಷದ ದೃಷ್ಟಿಯಿಂದ ನಾನು ಜಿಲ್ಲಾ ಸಚಿವರು ಮತ್ತು ಅರಸೀಕೆರೆ ಶಾಸಕರು ಕ್ಷೇತ್ರದ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವಂತೆ ಮನವಿ ಮಾಡಿದ್ದೆ. ಆದರೆ, ಇದನ್ನ ಅವರು ಬೇರೆ ಅರ್ಥ ಕಲ್ಪಿಸಿಕೊಂಡು ನನ್ನ ಬಗ್ಗೆ ಮಾತನಾಡಿದ್ದಾರೆ. ಅವರ ಮನಸ್ಥಿತಿ ಏನೆಂಬುದು ಈಗಾಗಲೇ ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟಾಂಗ್ ನೀಡಿದರು.
ಸರ್ಕಾರದ ಕ್ಯಾಬಿನೆಟ್‌ನಲ್ಲಿ ಮಂತ್ರಿ ಆಗಿರುವಂತಹ ಸಚಿವರು ನಾನು ಹೈಕಮಾಂಡ್‌ಗೆ ಗುಲಾಮರಲ್ಲ, ನಾನು ಯಾರಿಗೂ ಹೆದರುವುದಿಲ್ಲ ಎಂದು ಮಾತನಾಡುವವರಿಗೆ ನಾನು ಯಾವ ಲೆಕ್ಕ, ಜನರಿಗೆ ಗೌರವ,ಮತ್ತು ಉತ್ತರ ಕೊಡದವರು, ಜನರಿಗೆ ಸ್ಪಂದಿಸುವವರು ನಾಯಕರಾಗುತ್ತಾರೆ ಎಂದು ಕಿಡಿಕಾರಿದರು.
ನಮ್ಮ ರಾಜ್ಯದ ಒಬ್ಬ ರಾಜಕೀಯ ಮುಸ್ಸದಿ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ.ಅವರಿಗೆ ಗೌರವ ಕೊಡುವುದಿಲ್ಲ ಎನ್ನುವ ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಇದು ಕಾರ್ಯಕರ್ತರಿಗೆ ನೋವು ಆಗಿದೆ. ನಾನು ಸೋತಿದ್ದೇನೆ, ಅವರೂ ಸೋತಿದ್ದಾರೆ. ಅವರಿಗೂ ಆ ಪದ ಅನ್ವಯವಾಗಲ್ಲವಾ? ಎಂದು ಪ್ರಶ್ನಿಸಿದರು.ಈಗಾಗಲೇ ಪಕ್ಷದ ವರಿಷ್ಠರು ಅವರಿಗೆ ಸೂಚನೆ ನೀಡಿದ್ದಾರೆ ಮುಂದೆ ಈ ರೀತಿ ಮಾತನಾಡದಂತೆ ಎಚ್ಚರಿಕೆ ನೀಡಿದ್ದಾರೆ ಇದೇ ರೀತಿ ಮುಂದುವರೆದರೆ ಅವರ ವಿರುದ್ಧ ದೂರು ನೀಡಲಾಗುವುದು ಎಂದು ಹೇಳಿದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಎಲ್ಲಾ ಪಕ್ಷದವರು ಚುನಾವಣೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನಿಂದ ಆ ಕೆಲಸ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಸಕಲೇಶಪುರ, ಬೇಲೂರು ಭಾಗದಲ್ಲಿ ದೇವೇಗೌಡರು ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡುತ್ತಾರೆ, ಕಾಫಿ ಬೆಳೆಗಾರರ ಒತ್ತುವರಿ ಸಮಸ್ಯೆ, ಕಾವೇರಿ ವಿಚಾರ,ಭೂ ಒತ್ತುವರಿ ಸಮಸ್ಯೆ ಇತ್ಯರ್ಥಕ್ಕೆ ಪ್ರಧಾನಿ ಆಗಿದ್ದಾಗ ಪ್ರಯತ್ನಿಸಿದ್ದೆ ಎನ್ನುವ ಅವರು 11 ತಿಂಗಳ ಅವಧಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬಹುದಿತ್ತು. ಕಾಡಾನೆ ಸಮಸ್ಯೆ ನಿರಂತರವಾಗಿದೆ.ಈ ಎಲ್ಲಾ ಸಮಸ್ಯೆಗಳನ್ನು ಜೀವಂತವಾಗಿಇಟ್ಟಿಕೊಳ್ಳುವುದು ಜಾಣ್ಮೆ. ಚುನಾವಣೆ ಬಂದಾಗಲೇ ಇದೆಲ್ಲಾ ಜ್ಞಾಪಕಕ್ಕೆ ಬರುತ್ತದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಯುತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೋಮಲೇಶ್, ಮುಖಂಡರಾದ ಆದಿಲ್, ಬಸವರಾಜು, ಪ್ರಸನ್ನ, ಕೀರ್ತಿ ಇದ್ದರು
ಜಿಲ್ಲೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ:
ನಾವು ಅಧಿಕಾರಕ್ಕೆ ಬರುವಾಗ ಬಿಜೆಪಿ 40 ಪಸೆರ್ಂಟ್ ಲಂಚ ಅಂತಾ ಆರೋಪ ಮಾಡಲಾಗಿತು. ಆದರೆ ಈಗ ಜಿಲ್ಲೆಯಲ್ಲಿ ಅದಕ್ಕಿಂತ ಹೆಚ್ಚಾಗಿದೆ. ಅದಕ್ಕೆ ಕಡಿವಾಣ ಹಾಕಿ ಎಂದು ನಾನೇ ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಎನ್ನುವ ಮೂಲಕ ತಮ್ಮದೇ ಸರ್ಕಾರದ ಆಡಳಿತದ ವಿರುದ್ಧ ಶಿವರಾಂ ಗಂಭೀರ ಆರೋಪ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಾನೇ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇನೆ ನಾನೆಂದು ಕೂಡ ಅಧಿಕಾರಕ್ಕಾಗಿ ಮತ್ತು ವರ್ಗಾವಣೆಗಾಗಿ ಯಾರ ಹತ್ತಿರಾ ಹೋಗಿಲ,್ಲ ನನ್ನ ವಿರುದ್ಧ ಕಳೆದ ಚುನಾವಣೆಯಲ್ಲಿ ಷಡ್ಯಂತರ ನಡೆಸಿ ಸೋಲಿಗೆ ಕಾರಣಕರ್ತರಿದ್ದಾರೆ ಎಂದು ಪರೋಕ್ಷವಾಗಿ ಗ್ರಾನೈಟ್ ರಾಜಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು
ಅನುದಾನದಲ್ಲಿ ತಾರತಮ್ಯ:
ಹಾಸನ ಜಿ.ಪಂ.ಗೆ 13 ಕೋಟಿ ರೂ. ಅನುದಾನ ಬಂದಿದೆ. ಅದರ ಹಂಚಿಕೆಯಲ್ಲಿ ದೊಡ್ಡ ತಾರತಮ್ಯ ಆಗಿದೆ. ಈ ಅನುದಾನ ಉಸ್ತುವಾರಿ ಸಚಿವರ ವಿವೇಚನಾಧಿಕಾರದ ಕೋಟಾ ಅಂತೆ. ಕೇವಲ 50 ಸಾವಿರ ಇರುವ ಸಚಿವರ ಸಮುದಾಯಕ್ಕೆ ಎರಡೂವರೆ ಕೋಟಿ ಅನುದಾನವಂತೆ ಎಂದು ಕಿಡಿಕಾರಿದರು.
ಜಿಲ್ಲೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಇರುವ ಪರಿಶಿಷ್ಟ ಸಮುದಾಯಕ್ಕೆ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಮೂರು ಕೋಟಿ ರೂ. ಅನುದಾನ ಕೊಟ್ಟಿದ್ದಾರೆ ಎಂದು ಹರಿಹಾಯ್ದರು.
ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಸಿಎಂ ಅವರ ಸಮ್ಮುಖದಲ್ಲಿ ಬೆಳಗಾವಿಯಲ್ಲಿ ಕೇಳಲಾಯಿತು . ಆದರೆ ಸಿಎಂ ಮೌನವಾಗೇ ಇದ್ದರು, ನಮ್ಮ ಸಚಿವರ ಬೆನ್ನುತಟ್ಟಿ ಸರಿ ಮಾಡ್ಕೊಂಡ್ ಹೋಗು ಅಂತ ಹೇಳಿದರು ಎಂದರು.
ಶೀಘ್ರದಲ್ಲೇ ವರಿಷ್ಠರಿಗೆ ಮನವಿ ಪತ್ರ:
ಜಿಲ್ಲೆಯ ವಸ್ತುತಿ ಮತ್ತು ಪಕ್ಷ ಸಂಘಟನೆಯ ಬಗ್ಗೆ ವಾಸ್ತವಂಶವನ್ನು ಪಕ್ಷದ ವರಿಷ್ಠರು ಮತ್ತು ಹೈಕಮಾಂಡ್‌ಗೆ ತಿಳಿಸುವ ದೃಷ್ಟಿಯಿಂದ ಮನವಿ ಪತ್ರವನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು. ಇದು ಯಾರ ಮೇಲೆಯೂ ದೂರು ಅಲ್ಲ ಮತ್ತು ಆರೋಪಗಳಲ್ಲ ವಸ್ತು ಸ್ಥಿತಿಯನ್ನು ತಿಳಿಸುವ ದೃಷ್ಟಿಯಿಂದ ಪತ್ರ ಬರೆಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.