

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಸಚಿವ ಸಂಪುಟ ವಿಸ್ತರಣೆಗೆ ಹೈ ಕಮಾಂಡ್ ನಿರ್ಣಯ ಮಾಡಿದರೆ, ಪಕ್ಷದ ಹಿರಿಯರು-ಕಿರಿಯರು ತಲೆ ಬಾಗಬೇಕು. ಸಿಎಂ ಬದಲಾವಣೆ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವನ್ನು ಅಭದ್ರಗೊಳಿಸುವ ಕೆಲಸ ಬಿಜೆಪಿ ಮಾಡಿತ್ತು. ನಾವೆಲ್ಲ ಒಗ್ಗಟ್ಟಾಗಿ ಎದುರಿಸಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಮುಂದಾಳತ್ವ ವಹಿಸಿ ಉಪ ಚುನಾವಣೆಯನ್ನು ಯಶಸ್ವಿ ಮಾಡಿದ್ದಾರೆ. ಉಪ ಚುನಾವಣೆ ಫಲಿತಾಂಶ ಬಿಜೆಪಿಗೆ ಕಪಾಳಮೋಕ್ಷವಾಗಿದೆ ಎಂದರು.
ಶಾಸನ ಬಸನಗೌಡ ಪಾಟೀಲ, ಸಿಎಂ ವಿರುದ್ಧ ಅಪ ಪ್ರಚಾರ ನಡೆಸಿ ಅವರನ್ನು ದುರ್ಬಲಗೊಳಿಸಲು ಪ್ರಯತ್ನ ನಡೆಸಿದ್ದರು. ಈಗ ಅವರು ಬಿಜೆಪಿಯನ್ನು ದುರ್ಬಲಗೊಳಿಸಲು ಹೊರಟಿದ್ದಾರೆ. ಹಾಸನದಲ್ಲಿ ಆಯೋಜಿಸಿರುವ ಸ್ವಾಭಿಮಾನಿ ಸಮಾವೇಶದ ಕುರಿತು ಯಾರೋ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೇಶದಲ್ಲಿ ಗೊಂದಲ ಸೃಷ್ಟಿಸುವವರಿಗೆ ಉತ್ತರ ನೀಡಲು ಸಮಾವೇಶ ಮಾಡುತ್ತಿದ್ದೇವೆ. ಮೂಲ ಕಾಂಗ್ರೆಸ್ಸಿಗರಾಗಿ ನಾವೇ ಚರ್ಚೆ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಬೆಳಗಾವಿ ಜಿಲ್ಲೆ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಪ್ರತಿ ವರ್ಷ ಸುಮಾರು 1.25 ಕೋಟಿ ಭಕ್ತರು ಭೇಟಿ ನೀಡುತ್ತಾರೆ. ಕೇಂದ್ರ ಸರ್ಕಾರ ಯಲ್ಲಮ್ಮನ ಗುಡ್ಡ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ನೀಡಿದೆ. ನಮ್ಮ ಬೇಡಿಕೆಯ ಪೂರ್ಣ ಭಾಗ ಅಲ್ಲದಿದ್ದರೂ ಗಣನೆಗೆ ತೆಗೆದುಕೊಳ್ಳುವಂಥ ಅನುದಾನ ಮಂಜೂರು ಮಾಡಿರುವುದಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಅಭಿನಂದಿಸುತ್ತೇವೆ. ಬೆಳಗಾವಿ ಜಿಲ್ಲಾಧಿಕಾರಿಯವರಿಗೆ ಯಲ್ಲಮ್ಮನ ಗುಡ್ಡ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರಿಸಲು ಸೂಚಿಸಿದ್ದೇವೆ ಎಂದು ಹೇಳಿದರು.