

ಹಾಸನ: ಹಾಸನ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಎಚ್.ಡಿ. ರೇವಣ್ಣ ಸ್ಪರ್ಧಿಸಿದರೆ ತಾವು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದಾಗಿ ಹಿಂದೆ ಹಾಕಿದ್ದ ಸವಾಲಿಗೆ ಈಗಲೂ ಬದ್ಧ ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್ ಜೆ. ಗೌಡ ಪುನರುಚ್ಚರಿಸಿದ್ದಾರೆ.
ನಗರದಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಎಚ್.ಡಿ. ರೇವಣ್ಣ ಸ್ಪರ್ಧೆ ಮಾಡುವ ಸಾಧ್ಯತೆ ಇರುವ ಕುರಿತು ಪ್ರಶ್ನಿಸಿದಾಗ, ಮೊದಲು ಚುನಾವಣೆ ಅಧಿಸೂಚನೆ ಹೊರಬಂದು ರೇವಣ್ಣನವರು ನಾಮಪತ್ರ ಸಲ್ಲಿಸುವವರೆಗೂ ಎಲ್ಲವೂ ಊಹಾಪೋಹವೇ. ಆದರೆ ತಾವು 18 ತಿಂಗಳ ಹಿಂದೆ ಹಾಕಿದ್ದ ಸವಾಲಿಗೆ ಈಗಲೂ ಬದ್ಧನಿದ್ದೇನೆ ಎಂದರು.
ಹಾಸನ ಕ್ಷೇತ್ರದಲ್ಲಿ ರೇವಣ್ಣ ವಿರುದ್ಧ ನಾನು 50 ಸಾವಿರ ಮತಗಳಿಗಿಂತ ಹೆಚ್ಚಿನ ಅಂತರದಲ್ಲಿ ಜಯಗಳಿಸುತ್ತೇನೆ. ಈ ಗೆಲುವಿನ ಅಂತರದಲ್ಲಿ 1 ಮತ ಕಡಿಮೆ ಆದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸುತ್ತೇನೆ ಎಂಬುದಾಗಿ ಶಾಸಕ ಪ್ರೀತಮ್ ಗೌಡ ಹದಿನೆಂಟು ತಿಂಗಳ ಹಿಂದೆಯೇ ಪಂಥಾಹ್ವಾನ ನೀಡಿದ್ದರು.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ:
ಇತ್ತ ಜೆಡಿಎಸ್ ಟಿಕೆಟ್ ಗೊಂದಲದ ನಡುವೆಯೂ ಹಾಸನ ಕ್ಷೇತ್ರ ಸಂಚಾರ ಮುಂದುವರಿಸಿರುವ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಸಹ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂಬ ಮಾತನ್ನು ಪುನರುಚ್ಚಿಸಿದ್ದಾರೆ.
ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಕ್ಷೇತ್ರದಿಂದ ಎಚ್.ಡಿ. ರೇವಣ್ಣನವರು ಅಭ್ಯರ್ಥಿ ಆಗಬೇಕೆಂಬುದು ಹೈಕಮಾಂಡ್ ನಿರ್ಧಾರವಾದರೆ ಅದಕ್ಕೆ ಸ್ವಾಗತವಿದೆ. ನಾನು ಅಭ್ಯರ್ಥಿ ಆದರೂ ರೇವಣ್ಣನವರು ಸ್ವಾಗತಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಎಲ್ಲರು ಒಟ್ಟಾಗಿ ಕೆಲಸ ಮಾಡುತ್ತೇವೆ. ಟಿಕೆಟ್ ವಿಚಾರವಾಗಿ ನನ್ನೊಂದಿಗೆ ಪಕ್ಷದ ವರಿಷ್ಠರು ಯಾವುದೇ ಚರ್ಚೆ ನಡೆಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.