

ಚಿತ್ರದುರ್ಗ: ದೇಶದ ಉದ್ದಗಲಕ್ಕೂ ನಡೆಯುವ ಗಣೇಶೋತ್ಸವವನ್ನು ಮಹಾರಾಷ್ಟ್ರ ಮಾದರಿ ನಾಡಹಬ್ಬವನ್ನಾಗಿ ಘೋಷಿಸಬೇಕಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ವಿಎಚ್‌ಪಿ, ಬಜರಂಗದಳ ನಗರದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಶೋಭಾಯಾತ್ರೆಯಲ್ಲಿ(ಸೆ.13)ಡಿಜೆ ಬಳಸಲು ಅನುಮತಿ ಕೊಡುವಂತೆ ಒತ್ತಾಯಿಸಿ ಹಾಗೂ ವಿಎಚ್‌ಪಿ ರಾಜ್ಯ ಸಹಕಾರ್ಯದರ್ಶಿ ಶರಣ್‌ಪಂಪವೆಲ್ ಅವರಿಗೆ ಚಿತ್ರದುರ್ಗ ಜಿಲ್ಲೆಗೆ ವಿಧಿಸಿರುವ ನಿಷೇಧ ಖಂಡಿಸಿ ಜೈನಧಾಮದಲ್ಲಿ ಏರ್ಪಡಿಸಿದ್ದ ಪ್ರತಿಭಟನಾ ರ‌್ಯಾಲಿಯನ್ನುದ್ದೇಶಿಸಿ ಮಾತನಾಡಿದರು.
ಸೋನಿಯಾ ಗಾಂಧಿ ಮತ್ತಿರರ ಕಾಂಗ್ರೆಸ್ ನಾಯಕರನ್ನು ಖುಷಿಪಡಿಸಲು ಹಿಂದುಗಳ ಉತ್ಸವಕ್ಕೆ ಅಡ್ಡಿ ಪಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಕಳೆದ 18 ವರ್ಷಗಳಿಂದಲೂ ನಗರದಲ್ಲಿ ಹಿಂದು ಮಹಾಗಣಪತಿ ಶೋಭಾಯಾತ್ರೆ ಯಶಸ್ವಿಯಾಗಿ ನಡೆದಿದೆ. ಸಣ್ಣ ಅಹಿತಕರ ಘಟನೆಯಾಗಿಲ್ಲ. ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಯಾತ್ರೆಯಲ್ಲಿ ಪಾಲ್ಗೊಂಡು ಭಕ್ತಿ ಪ್ರದರ್ಶಿಸುತ್ತಿದ್ದಾರೆ. ರಾಜ್ಯದ ಇತರೆಡೆ ಡಿಜೆಗೆ ಅನುಮತಿ ಕೊಡಲಾಗಿದೆ. ಇಲ್ಲಿ ಯಾಕಿಲ್ಲ? ಸೆ.12ರ ಬೆಳಗ್ಗೆಯೊಳಗೆ ಅನುಮತಿ ಕೊಡಬೇಕೆಂದು ಗಡುವು ವಿಧಿಸಿದರು.
ಶರಣ್ ಪಂಪ್‌ವೆಲ್ ನಿರ್ಬಂಧ ಹೇರಿರುವುದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮದ್ದೂರು ಕಲ್ಲು ತೂರಾಟದ ಘಟನೆಯಲ್ಲಿ ಬಿಜೆಪಿ-ಜೆಡಿಎಸ್ ರಾಜಕಾರಣ ಮಾಡಿದೆ ಎಂಬ ಕಾಂಗ್ರೆಸ್ಸಿಗರ ಮಾತಿನ ವಿರುದ್ಧ ಕೆಂಡಕಾರಿದರು.
ಅನ್ಯಕೋಮಿನ ಓಲೈಕೆ ರಾಜಕಾರಣದಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಎಲ್ಲ ಧರ್ಮಗಳನ್ನು ಪ್ರೀತಿಸುವಂಥದ್ದು ಹಿಂದು ಧರ್ಮ. ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟಿರುವಂಥ ಸಂವಿಧಾನದಡಿ ಸರ್ವರು ಜತೆಯಾಗಿ ಬದುಕಬೇಕು. ಅಧಿಕಾರಿಗಳು ಯಾವುದೇ ಪಕ್ಷದ ಗುಲಾಮರಾಗಬಾರದು. ಮುಂದಿನ ಜನ್ಮ ಯಾಕೆ ಈಗಲೇ ಮತಾಂತರವಾಗುವಂತೆ ಭದ್ರಾವತಿ ಶಾಸಕ ಸಂಗಮೇಶ್ವರ್‌ಗೆ ಸವಾಲು ಹಾಕಿದರು.
ಹಿಂದುತ್ವದ ರಕ್ಷಣೆ ನಮ್ಮ ಬದ್ಧತೆ. ವೋಟು ಯಾರಿಗಾದರೂ ಹಾಕಿಕೊಳ್ಳಿ. ಆದರೆ, ಯಾರೂ ಹಿಂದುತ್ವವನ್ನು ಬಲಿಕೊಡಬಾರದು ಎಂದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಎಫ್‌ಎಸ್‌ಎಲ್ ವರದಿ ಬಂದಿದ್ದರೂ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರನ್ನು ಈವರೆಗೂ ಬಂಧಿಸಿಲ್ಲ. ಕರ್ನಾಟಕವನ್ನು ಸಿಎಂ ಪಾಕಿಸ್ತಾನವನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಂಜುನಾಥ ಸ್ವಾಮಿ,ಅಣ್ಣಪ್ಪ ಸ್ವಾಮಿ, ಗಣಪತಿ, ಚಾಮುಂಡೇಶ್ವರಿ ತಾಯಿ ಶಾಪ ಈ ಸರ್ಕಾರಕ್ಕೆ ತಟ್ಟಲಿದೆ ಎಂದರು.
ಶೋಭಾಯಾತ್ರೆ ನಡೆಸಲ್ಲ
ಎಂಎಲ್‌ಸಿ ಎನ್.ರವಿಕುಮಾರ್ ಮಾತನಾಡಿ, ಡಿಜೆಗೆ ಅನುಮತಿ ಕೊಡದಿದ್ದರೆ ಶೋಭಾಯಾತ್ರೆ ನಡೆಯದು. ಇದೇ ಸ್ಥಳದಲ್ಲೇ ನಿತ್ಯವೂ ಗಣೇಶನ ಪೂಜೆ ನೆರವೇರಿಸುತ್ತೇವೆ ಎಂದು ಜಿಲ್ಲಾಡಳಿತವನ್ನು ಎಚ್ಚರಿಸಿದರು.
ಒಂದು ಕೋಮಿನ ವಿಪರೀತ ತುಷ್ಟೀಕರಣವೇ ಜಾತ್ಯತೀತತೆ ಎಂದು ಕಾಂಗ್ರೆಸ್ ಭಾವಿಸಿದೆ. ನಾವು ಆಚರಿಸಲು ಹೊರಟಿರುವುದು ಶೋಭಾಯಾತ್ರೆ ಹೊರತು ಶವಯಾತ್ರೆ ಅಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಹೈಕೋರ್ಟ್ ಆದೇಶವಿದೆ
ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ, ಚಿತ್ರದುರ್ಗ ಮದಕರಿ ನಾಯಕ, ವೀರ ವನಿತೆ ಒನಕೆ ಓಬವ್ವ ನಾಡು. ಎಸ್‌ಪಿ, ಡಿಸಿಗಳು ಸರ್ಕಾರದ ಕೈಗೊಂಬೆಗಳಾಗಿದ್ದಾರೆ. ಡಿಜೆಗೆ ನಿರ್ಬಂಧ ವಿಧಿಸಬಾರದು ಎಂದು ಹೈಕೋರ್ಟ್ ಆದೇಶವಿದೆ. ಕಾಂಗ್ರೆಸ್ ಸರ್ಕಾರ ಪಟಾಕಿ ಸಿಡಿಸುವವರ ವಿರುದ್ಧ ಕೇಸು ಹಾಕುತ್ತದೆ ಹೊರತು,ಬಾಂಬ್ ಹಾಕುವವರ ಮೇಲಲ್ಲವೆಂದು ಕಿಡಿಕಾರಿದರು.
ವಿಎಚ್‌ಪಿ ಪ್ರಮುಖರಾದ ದೀಪಕ್‌ರಾಜ್, ಪ್ರಭಂಜನ್ ಮಾತನಾಡಿದರು. ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಡಾ.ಸಿದ್ದಾರ್ಥ ಗುಂಡಾರ್ಪಿ, ಬದ್ರಿನಾಥ್, ಉಮೇಶ್ ಕಾರಜೋಳ, ಶರಣ್, ಮೋಹನ್, ಚನ್ನಕೇಶವ, ಶರಣ್‌ಕುಮಾರ್, ಸಂದೀಪ್, ಮಾಧುರಿ ಗಿರೀಶ್, ಸೋಮಣ್ಣ ಮತ್ತಿತರ ಬಿಜೆಪಿ, ವಿಎಚ್‌ಪಿ, ಬಜರಂಗದಳ, ಹಿಂದುಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಇದ್ದರು.
ಜೈನಧಾಮದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಮದಕರಿ ನಾಯಕ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಒನಕೆ ಓಬವ್ವ ವೃತ್ತದ ಮೂಲಕ ಡಿಸಿ ಕಚೇರಿ ತಲುಪಿತು. ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. ಬೃಹಧಾಕಾರದ ಕೇಸರಿ ಧ್ವಜಗಳನ್ನು ಹಿಡಿದಿದ್ದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.