ಹೈ ವೋಲ್ಟೇಜ್ ವಿದ್ಯುತ್, ಪಂಪ್‌ಸೆಟ್ ಭಸ್ಮ

20ath1
ಕೊಕಟನೂರ ಗ್ರಾಮದ ಜನತಾ ಬಡಾವಣೆ ವಿದ್ಯುತ್ ತಂತಿಗಳು ಒಂದಕ್ಕೊಂದು ತಗುಲದಂತೆ ಕಲ್ಲು ಜೋತು ಬಿಟ್ಟಿರುವುದು.
Published on

ಅಥಣಿ ಗ್ರಾಮೀಣ: ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಯಲ್ಲಮ್ಮವಾಡಿಯ ಹೆಸ್ಕಾಂ ವಿದ್ಯುತ್ ಘಟಕದಿಂದ ಸರಬರಾಜಾಗುವ ವಿದ್ಯುತ್ ವೋಲ್ಟೇಜ್‌ನಲ್ಲಿ ಏರಿಳಿತವಾಗುತ್ತಿರುವುದರಿಂದ ಬಲ್ಬ್, ಪಂಪ್‌ಸೆಟ್, ಫ್ರಿಜ್ಡ್, ಟಿವಿ ಸೇರಿ ನೂರಾರು ವಿದ್ಯುತ್ ಉಪಕರಣಗಳು ಸುಟ್ಟು ಹೋಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಜನರು ದೂರುತ್ತಿದ್ದಾರೆ.

15 ದಿನದಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಬಾಗಿವೆ. ಕೊಕಟನೂರ ಗ್ರಾಮದ ಜನತಾ ಬಡಾವಣೆ ಮನೆಗಳಿಗೆ ಸರಬರಾಜು ಮಾಡುವ ಕಂಬಗಳ ವಿದ್ಯುತ್ ಮುಖ್ಯ ಲೈನ್‌ಗಳು ಹಾಗ ಮನೆಗಳಿಗೆ ಸರಬರಾಜು ಮಾಡುವ ಲೈನ್‌ಗಳು ಕೂಡಿ ಶಾರ್ಟ್ ಆಗಿ, ಬಡಾವಣೆಯಲ್ಲಿ ಕಿಡಿ ಹೊತ್ತಿಕೊಳ್ಳುತ್ತಿವೆ. ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಸರಬರಾಜಾಗಿರುವುದರಿಂದ ಲಕ್ಷಾಂತರ ರೂ. ಮೌಲ್ಯಗಳ ವಿದ್ಯುತ್ ಪರಿಕರಗಳು ನಾಶವಾಗಿವೆ. ಕೊಕಟನೂರ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪಂಪ್‌ಸೆಟ್ ಸುಟ್ಟಿದ್ದರಿಂದ ನೀರು ಸರಬರಾಜು ವ್ಯವಸ್ಥೆ ಬಂದ್ ಆಗಿದೆ. ಜನರು ಬಾವಿ, ಬೋರ್‌ವೆಲ್‌ಗಳಿಗೆ ಹೋಗಿ ನೀರು ತರುವಂತಾಗಿದೆ.

ಇಷ್ಟೆಲ್ಲ ಸಮಸ್ಯೆಗಳು ಉದ್ಭವವಾಗಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಸಮಸ್ಯೆ ನಿವಾರಿಸುವಂತೆ ಸ್ಥಳೀಯ ಶಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಇನ್ನೆರಡು ದಿನಗಳಲ್ಲಿ ದುರಸ್ತಿಗೊಳಿಸದಿದ್ದರೆ ಕೊಕಟನೂರ ಶಾಖಾ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ರಾಮು ತಳವಾರ, ಪರಶುರಾಮ ಚವ್ಹಾಣ, ರಾಜು ಕಾಂಬಳೆ, ಅಪ್ಪಾಸಾಬ ಬಡಚಿ, ಅಣ್ಣಪ್ಪ ಮಂಟೂರ, ಆದಮ್ ಮುಲ್ಲಾ, ರೋಹಿದಾಸ ಹೊನಕಾಂಬಳೆ ಎಚ್ಚರಿಕೆ ನೀಡಿದ್ದಾರೆ. ಅಥಣಿ ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತ ವಿಜಯಕುಮಾರ ಕೊಲೆ ಅವರಿಗೆ ಎರಡು ದಿನದಿಂದ ಪ್ರತಿಕ್ರಿಯೆ ಪಡೆಯುವುದಕ್ಕೆ ಕಚೇರಿಗೆ ತೆರಳಿದಾಗ ಇರಲಿಲ್ಲ. ಕರೆ ಮಾಡಿದರೂ ಸ್ವೀಕರಿಸಿಲ್ಲ ಎಂದು ಜನರು ಆಕ್ರೋಶಗೊಂಡಿದ್ದಾರೆ.

ಬಾಗಿದ ವಿದ್ಯುತ್ ಕಂಬಗಳನ್ನು ಸರಿಪಡಿಸಿಲ್ಲ. ಹಲವು ಬಾರಿ ಹೇಳಿದರೂ ಅಧಿಕಾರಿಗಳು ದುರಸ್ತಿಗೊಳಿಸಿಲ್ಲ. ಸಮಸ್ಯೆ ಹೇಳಲು ಕಚೇರಿಗೆ ಹೋದರೂ ಇರುವುದಿಲ್ಲ. ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ಇಂತಹ ಅಧಿಕಾರಿಗಳ ಮೇಲೆ ಮೇಲಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು.| ಬಾಳಾಸಾಬ ಪೂಜಾರಿ ಕೊಕಟನೂರ ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net