ಹೇಮೆ ಕಂಡು ಭಾವುಕರಾದ ಚಿಕ್ಕನಾಯಕನಹಳ್ಳಿ ತಾಲೂಕು ಜನ

heme
Published on

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಜನರ ಬಹುಕಾಲದ ಕನಸು ಶುಕ್ರವಾರ ನನಸಾಗಿದ್ದು, ನೂತನ ನಾಲೆಯಲ್ಲಿ ಹರಿದ ಹೇಮಾವತಿ ಸಾಸಲು ಕೆರೆ ತುಲುಪಿತು.

ನೀರು ಹರಿಯುವುದನ್ನು ಕಣ್ತುಂಬಿಕೊಳ್ಳಲು ನಾಲೆಯ ಎರಡೂ ಬದಿಯಲ್ಲಿ ಸಾವಿರಾರು ಜನರು ಜಮಾಯಿಸಿ ನೀರು ಬಂದಾಗ ಭಾವುಕರಾದರು. ಚಪ್ಪಾಳೆ ತಟ್ಟಿ, ಕೇಕೆ ಹಾಕಿ ಖುಷಿಪಟ್ಟರು, ಇನ್ನೂ ಕೆಲವರು ನಾಲೆಗೆ ಇಳಿದು ಗಂಗೆಯ ಸ್ಪರ್ಶಿಸಿದರು.

ತುಮಕೂರು ಶಾಖಾ ನಾಲೆಯ 45ನೇ ಕಿಮೀನಿಂದ ಬೆಳಿಗೆರೆ ಪಾಳ್ಳದ ಬಳಿ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಹೇಮಾವತಿ ಅಧಿಕಾರಿಗಳು ಗೇಟ್ ತೆರೆದರು. ಹೊಸ ನಾಲೆಯಾಗಿರುವ ಕಾರಣಕ್ಕೆ 50 ಕ್ಯೂಸೆಕ್ ನೀರನ್ನು ಚಿಕ್ಕನಾಯಕನಹಳ್ಳಿ ನಾಲೆಗೆ ಹರಿಯಬಿಡಲಾಯಿತು, ಸಂಜೆ 4.30ಕ್ಕೆ ಸಾಸಲು ಕೆರೆ ತುಲುಪಿತು.

ತುಮಕೂರು ಶಾಖಾ ನಾಲೆಯಲ್ಲಿ 1000ಕ್ಯೂಸೆಕ್ ನೀರು ಹರಿಯುತ್ತಿದ್ದು, ಚಿಕ್ಕನಾಯಕನಹಳ್ಳಿ ನಾಲೆಯಲ್ಲಿ 130 ಕ್ಯೂಸೆಕ್ ಸಾಮರ್ಥ್ಯ ಹೊಂದಿದೆ, ಅ.13ರಿಂದ ನಾಲೆಯಲ್ಲಿ ನೀರಿನ ಸಾಮರ್ಥ್ಯ ಹೆಚ್ಚಿಸುವ ಸಾಧ್ಯತೆಯಿದೆ. ಪ್ರಾಯೋಗಿಕವಾಗಿ ಹೇಮಾವತಿ ನೀರು ಸತತ ಎರಡು ತಿಂಗಳು ಹರಿಯಲಿದ್ದು, ಮುಂದಿನ ಹತ್ತು ದಿನದಲ್ಲಿ ಸಾಸಲು ಕೆರೆ ಭರ್ತಿಯಾಗಲಿದೆ, ಸಾಸಲು ಕೆರೆಯಿಂದ ಶೆಟ್ಟಿಕೆರೆ ಕೆರೆಗೆ 8 ಕಿಮೀ ದೂರವಿದ್ದು ಮುಂದಿನ ಹತ್ತು ದಿನದಲ್ಲಿ ನೀರು ಶೆಟ್ಟಿಕೆರೆ ತಲುಪಲಿದೆ.

ನಾಲೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಹರಿಯುವ ನೀರಿನ ಪ್ರಮಾಣವನ್ನು 100ಕ್ಯೂಸೆಕ್ ವರೆಗೂ ಹೆಚ್ಚಿಸಿದರೆ ನೀರು ವೇಗವಾಗಿ ತುಲುಪಲು ಸಾಧ್ಯವಿದೆ, ಹೊಸ ನಾಲೆಯಾದ್ದರಿಂದ ಅಧಿಕಾರಿಗಳು ನೀರಿನ ಪ್ರಮಾಣವನ್ನು ಹಂತಹಂತವಾಗಿ ಹೆಚ್ಚಿಸಲು ನಿರ್ಧರಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು ನಾಲೆಯಲ್ಲಿ ರಾಜಕಾರಣಿಗಳ ಅಬ್ಬರ ಕಣ್ಮೆರೆಯಾಗಿದೆ, ಯೋಜನೆಗೆ ವೇಗ ನೀಡಿ ನೀರು ಹರಿಸಲು ಶ್ರಮಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೂಡ ಕರೊನಾ ಸಂಕಿತರಾಗಿ ವಿಶ್ರಾಂತಿಯಲ್ಲಿದ್ದು ಯಾವುದೇ ಅಧಿಕೃತ ಕಾರ್ಯಕ್ರಮಗಳು ಸಧ್ಯಕ್ಕೆ ನಡೆಯುವ ಸಾಧ್ಯತೆಯಿಲ್ಲ. ಹೇಮಾವತಿ ವಿಭಾಗದ ಇಇ ಮೋಹನಕುಮಾರ್ ಹಾಗೂ ಎಇಇ ಮಹಮದ್ ಖಲೀದ್ ಸ್ಥಳದಲ್ಲಿ ಹಾಜರಿದ್ದು ನೀರು ಹರಿಸುವ ಪ್ರಕ್ರಿಯೆಗೆ ಸಾಕ್ಷಿಯಾದರು.

ನಾಲೆಯಲ್ಲಿ ನೀರು ಹರಿದಾಗ ನೆರೆದಿದ್ದ ಸಾಕಷ್ಟು ಜನರ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು, ಮುಂದಿನ 2ತಿಂಗಳು ನಾಲೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಯಲಿದ್ದು, ಸಾಸಲು ನಂತರ ಶೆಟ್ಟಿಕೆರೆ ಕೆರೆಗೆ ಮುಂದಿನ 20 ದಿನದಲ್ಲಿ ತಲುಪುವ ವಿಶ್ವಾಸವಿದೆ. ಖಲೀದ್ ಅಹಮದ್ ಎಇಇ, ಹೇಮಾವತಿ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net