ಹೇಮೆ ಒಡಲು ಭರ್ತಿಗೆ 7 ಅಡಿ ಬಾಕಿ; ಜೂನ್‌ನಲ್ಲೇ ಮೈದುಂಬಿದ ಜಿಲ್ಲೆಯ ಜೀವನಾಡಿ

24_HSN_01
Published on

ಹಾಸನ: ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯ ಜೂನ್‌ನಲ್ಲಿಯೇ ಮೈ ದುಂಬಿದ್ದು, ಡ್ಯಾಂ ಭರ್ತಿಗೆ ಇನ್ನು 5 ಟಿಎಂಸಿ ನೀರಿನ ಅವಶ್ಯಕತೆ ಇದೆ. 37 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 31.180 ನೀರು ಸಂಗ್ರಹವಾಗಿದ್ದು, ಜಿಲ್ಲೆ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಚುರುಕು ಪಡೆದುಕೊಂಡಿದ್ದು ಬಹುತೇಕ ಈ ಮಾಸಾಂತ್ಯದಲ್ಲೇ ಭರ್ತಿಯಾಗುವ ನಿರೀಕ್ಷೆ ಹೊಂದಲಾಗಿದೆ.

ಪ್ರಸ್ತುತ 2922 ಅಡಿ ಹೊಂದಿರುವ ಡ್ಯಾಂನಲ್ಲಿ 2915.56 ಅಡಿ ನೀರು ಸಂಗ್ರಹವಾಗಿದೆ. ಡ್ಯಾಂಗೆ (ಮಂಗಳವಾರ ಬೆಳಗ್ಗೆ 8 ಗಂಟೆಗೆ) 9,494 ಒಳಹರಿವಿದ್ದು, ಮಂಗಳವಾರದ ಹರಿವಿನ ಪ್ರಮಾಣ ಇನ್ನು ಹೆಚ್ಚಾಗಲಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 288.23 ಅಡಿ ನೀರು ಸಂಗ್ರಹವಾಗಿತ್ತು.

ಹೇಮಾವತಿ ಜಲಾಶಯದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ಶನಿವಾರ ಜಲಾಶಯದ ಆರು ಕ್ರಸ್ಟ್ ಗೇಟ್ ಗಳ ಮೂಲಕ ಮೊದಲ ಬಾರಿಗೆ 10 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗಿತ್ತು. ಸೋಮವಾರ ರಾತ್ರಿಯಿಂದ ಒಳಹರಿವಿನ ಪ್ರಮಾಣ ಹೆಚ್ಚಾಗಿರುವ ಕಾರಣ ಮಂಗಳವಾರ 12 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಮೇಲೆ ಆರು ಗೇಟ್‌ಗಳ ಕಳೆದ ಬಾರಿಗಿಂತ ಈ ಬಾರಿ ಮುಂಗಾರುಪೂರ್ವ ಮತ್ತು ಮುಂಗಾರು ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯದಲ್ಲಿ ನೀರು ಸಂಗ್ರಹವಾಗಿದೆ. ಹಲವು ವರ್ಷಗಳ ಬಳಿಕ ಜೂನ್‌ನಲ್ಲಿ ಡ್ಯಾಂ ಭರ್ತಿಯಾಗುತ್ತಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಕಳೆದ ವರ್ಷವೂ ತುಂಬಿದ್ದ ಡ್ಯಾಂ

ಹಾಸನ ಜಿಲ್ಲೆಯಲ್ಲಿರುವ ಹೇಮಾವತಿ ಜಲಾಶಯ ಕಳೆದ ವರ್ಷ ಕೂಡ ಭರ್ತಿಯಾಗಿ ಹಲವು ಬಾರಿ ಕ್ರಸ್ಟ್ ಗೇಟ್‌ಗಳ ಮೂಲಕ ನೀರನ್ನು ಹೊರಬಿಡಲಾಗಿತ್ತು. ಇದರ ಹಿಂದೆ ಅಂದರೆ 2019ರಲ್ಲಿ ಜಲಾಶಯ ಭರ್ತಿಯಾಗಿತ್ತು. ಅದಾಗ ಬಳಿಕ 2024ರ ಜುಲೈ ತಿಂಗಳಿನಲ್ಲಿ ಡ್ಯಾಂ ಸಂಪೂರ್ಣ ಭರ್ತಿಯಾಗಿತ್ತು. ಈ ವರ್ಷ ಜೂನ್‌ನಲ್ಲಿಯೇ ಡ್ಯಾಂ ಭರ್ತಿಯಾಗುವ ಸಾಧ್ಯತೆ ಹೆಚ್ಚಿದೆ.

ಹೇಮಾವತಿ ಜಲಾಶಯ ಒಟ್ಟು 7,89,520 ಎಕರೆಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಈ ಪೈಕಿ ಹಾಸನ ಜಿಲ್ಲೆಯ 1,55,030 ಎಕರೆ, ತುಮಕೂರು ಜಿಲ್ಲೆಯ 3,17,672 ಎಕರೆ, ಮಂಡ್ಯ ಜಿಲ್ಲೆಯ 2,30,885 ಎಕರೆ ಹಾಗೂ ಮೈಸೂರು ಜಿಲ್ಲೆಯ 5,665 ಎಕರೆಗೆ ನೀರಾವರಿ ಒದಗಿಸುತ್ತದೆ. ನೀರಾವರಿ ಕ್ಷೇತ್ರದ ಜತೆಗೆ ಗೊರೂರು ಜಲಾಶಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಈ ಬಾರಿ ಉತ್ತಮ ಮಳೆಯಾದ ಕಾರಣ ಜೂನ್ ತಿಂಗಳಿನಲ್ಲಿ ಜಲಾಶಯ ಭಾಗಶಃ ಭರ್ತಿಯಾಗಲಿದೆ. ಕಳೆದ ವರ್ಷ ಜುಲೈನಲ್ಲಿ ಉತ್ತಮ ಮಳೆಯಾದ್ದರಿಂದ ಆರು ಗೇಟ್‌ಗಳನ್ನು ತೆರೆಯಲಾಗಿತ್ತು. ಜಲಾಶಯ ಭರ್ತಿಯಾದ ನಂತರ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡುವುದನ್ನು ನೋಡಲು ಸಾವಿರಾರು ಮಂದಿ ಪ್ರವಾಸಿಗರು ಜಲಾಶಯಕ್ಕೆ ಲಗ್ಗೆ ಇಡುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಯುವಕ-ಯುವತಿರೇ ಹೆಚ್ಚಿನ ಸಂಖ್ಯೆಯಲ್ಲಿ ಡ್ಯಾಂಗೆ ಭೇಟಿ ನೀಡುತ್ತಾರೆ.

ಜಿಲ್ಲೆಯ ಬೇಲೂರಿನಲ್ಲಿರುವ ಯಗಚಿ ಜಲಾಶಯ ಹಾಗೂ ಆಲೂರಿನ ವಾಟೆಹೊಳೆ ಜಲಾಶಯಗಳು ಕೂಡ ಈಗಾಗಲೇ ಸಂಪೂರ್ಣವಾಗಿ ಭರ್ತಿಯಾಗಿದ್ದು, ಜಲಾಶಯದಿಂದ ನೀರನ್ನು ಹೊರ ಹರಿಸಲಾಗುತ್ತಿದೆ.

ಅಧಿಕ ಮಳೆಯಾಗುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಸಕಲೇಶಪುರ ತಾಲೂಕಿನ ಎಲ್ಲ ಅಂಗನವಾಡಿ ಮತ್ತು ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ತಿಳಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸೋಮವಾರ ರಾತ್ರಿಯಿಂದ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ ನದಿಗೆ ನೀರನ್ನು ಹರಿಸಲಾಗುತ್ತಿದೆ. ಮಂಗಳವಾರ 12 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಒಳಹರಿವಿನ ಪ್ರಮಾಣದ ಮೇಲೆ ಹೊರಹರಿವಿನಲ್ಲಿ ಹೆಚ್ಚು-ಕಡಿಮೆ ಆಗಲಿದೆ. ಮಳೆ ಹೀಗೆ ಮುಂದುವರಿದರೆ ಇನ್ನು ಆರು ದಿನದಲ್ಲಿ ಜಲಾಶಯ ಭರ್ತಿಯಾಗಲಿದೆ ಎಂದು ಹೇಮಾವತಿ ಜಲಾಶಯದ ಕಾರ್ಯಪಾಲಕ ಇಂಜಿನಿಯರ್ - ಕೆ.ಎಂ. ಸಚಿತ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net