

ಹಾಸನ: ಹೇಮಾವತಿ ಜಲಾಶಯದಿಂದ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಸೋಮವಾರ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ ನಡೆಸಿ, ಡ್ಯಾಂಗೆ ಮುತ್ತಿಗೆ ಹಾಕಲು ಯತ್ನಿಸಿದರು.
ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯ ಗೇಟ್ ಮುಂಭಾಗ ಜಮಾವಣೆಗೊಂಡ ಜೆಡಿಎಸ್ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಗೊರೂರು-ಅರಕಲಗೂಡು ರಸ್ತೆ ಸಂಚಾರ ತಡೆದು ಧರಣಿ ನಡೆಸಿದರು.
ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಮಾತನಾಡಿ, ಮಳೆ ಕೊರತೆಯಿಂದ ಹೇಮಾವತಿ ಅಚ್ಚುಕಟ್ಟು ಪ್ರದೇಶ ಸುಮಾರು ಆರೂವರೆ ಲಕ್ಷ ಎಕರೆಗೆ ಈ ಬಾರಿ ಬೆಳೆಗೆ ನೀರು ಹರಿಸಿಲ್ಲ. ಆದರೂ ಕಳೆದ 50 ದಿನಗಳ ಅಂತರದಲ್ಲಿ ಹೇಮಾವತಿ ಜಲಾಶಯದಿಂದ ಸುಮಾರು 16 ಟಿಎಂಸಿ ನೀರು ಹೊರಹೋಗಿದೆ. ರಾತ್ರೋರಾತ್ರಿ ನದಿ ಮೂಲಕ ಕೆಆರ್‌ಎಸ್‌ಗೆ ನೀರು ಹರಿಸಿ ತಮಿಳುನಾಡಿಗೆ ಬಿಡಲಾಗಿದೆ. ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ 17 ಟಿಎಂಸಿ ಮಾತ್ರ ನೀರಿದ್ದು, ಇದರಲ್ಲಿ 4.37 ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ. ಉಳಿದ 13 ಟಿಎಂಸಿ ನೀರು ಮುಂದಿನ ಮಳೆಗಾಲದವರೆಗೂ ಹಾಸನ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳ 24 ತಾಲ್ಲೂಕುಗಳ ಲಕ್ಷಾಂತರ ಜನರಿಗೆ ಕುಡಿಯಲು ಸಾಕಾಗುತ್ತದೆಯೇ ಎಂಬ ಕನಿಷ್ಠ ಪ್ರಜ್ಞೆಯೂ ಸರ್ಕಾರಕ್ಕೆ ಇಲ್ಲವಾಗಿದೆ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು, ಮೊದಲು ಆಗಾಗ್ಗೆ ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ಆದರೆ, ಕಳೆದ ಒಂದು ತಿಂಗಳಿಂದ ಕಾಣೆಯಾಗಿದ್ದಾರೆ. ಸಚಿವರೇ ಇಲ್ಲದ ಮೇಲೆ ಜಿಲ್ಲೆಯ ಜನರು ತಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳುತ್ತಾರೆ? ರೈತ ಪರ, ನೊಂದವರ ಪರ, ಬಡವರ ಪರ ಸರ್ಕಾರ ಎನ್ನುವ ನಿಮಗೆ ಇದರ ಅರಿವಿಲ್ಲವೇ ಎಂದು ಪ್ರಶ್ನಿಸಿದರು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಕಾವೇರಿ ಕೊಳ್ಳ ಸೇರಿ ಇಡೀ ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಾಗಿದ್ದು, 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮಳೆಯ ಕೊರತೆಯಿಂದ ಹೇಮಾವತಿ, ಕೆಆರ್‌ಎಸ್, ಕಬಿನಿ, ಹಾರಂಗಿ ಸೇರಿ ಯಾವುದೇ ಜಲಾಶಯಗಳು ಭರ್ತಿಯಾಗಿಲ್ಲ. ಪರಿಸ್ಥಿತಿ ಹೀಗಿದ್ದರೂ ಕಾವೇರಿ ಪ್ರಾಧಿಕಾರ ನಿರ್ವಹಣಾ ಸಮಿತಿ ಹಾಗೂ ಸುಪ್ರೀಂಕೋರ್ಟ್ ಆದೇಶದ ನೆಪವೊಡ್ಡಿ ತಮಿಳುನಾಡಿಗೆ ನೀರು ಬಿಡುತ್ತಿರುವುದು ಖಂಡನೀಯ. ತಮಿಳುನಾಡಿಗೆ ನೀರು ಹರಿಸದಿದ್ದರೆ ನ್ಯಾಯಾಂಗ ನಿಂದನೆಯಾಗಲಿದೆ ಎಂಬ ನೆಪ ಹೇಳಿಕೊಂಡು ನಮ್ಮ ರೈತರು, ಜನರ ಹಿತ ಬಲಿಕೊಟ್ಟು ನೆರೆ ರಾಜ್ಯದ ಹಿತ ಕಾಪಾಡಲಾಗುತ್ತಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ರೈತರ ಹಿತ ಕಾಯುವುದಾಗಿ ಭರವಸೆ ನೀಡಿ, ಈಗ ಕಾವೇರಿ ಕೊಳ್ಳದ ಅನ್ನದಾತರ ಹೊಟ್ಟೆ ಮೇಲೆ ಚಪ್ಪಡಿ ಎಳೆಯಲಾಗುತ್ತಿದೆ. ಕೂಡಲೇ ಹೇಮಾವತಿ ಹಾಗು ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು. ಇಂಡಿಯಾ ಮೈತ್ರಿಗೆ ಪೂರಕವಾಗಲಿ ಎಂದು ತಮಿಳುನಾಡಿನ ಓಲೈಕೆಗೆ ಮುಂದಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ನಗರಸಭೆ ಸದಸ್ಯರಾದ ಸಿ.ಆರ್. ಶಂಕರ್, ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು, ಅಮೀರ್ ಜಾನ್, ಚಂದ್ರೇಗೌಡ ಮತ್ತಿತರರು ಹಾಜರಿದ್ದರು.