ಹೇಮಾವತಿಯಿಂದ 1 ಲಕ್ಷ ಕ್ಯು.ನೀರು ಬಿಡುಗಡೆ:ಪ್ರವಾಹ ಭೀತಿ

ಹೇಮಾವತಿಯಿಂದ 1 ಲಕ್ಷ ಕ್ಯು.ನೀರು ಬಿಡುಗಡೆ:ಪ್ರವಾಹ ಭೀತಿ
Published on

ಹಾಸನ: ಸಕಲೇಶಪುರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ಸಂಜೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹೇಮಾವತಿ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಮಂಗಳವಾರ ಬೆಳಗ್ಗೆಯಿಂದ ಹೇಮಾವತಿ ಜಲಾಶಯದಿಂದ 1 ಲಕ್ಷ ಕ್ಯು.ನೀರನ್ನು ನದಿಗೆ ಹರಿಸಲಾಗುತ್ತಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಸೋಮವಾರ ಪೇಟೆ, ಸಕಲೇಶಪುರ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಮಂಗಳವಾರ 72 ಸಾವಿರ ಕ್ಯು. ನೀರು ಹರಿದುಬಂದಿರುವುದರಿಂದ ಹೊರಹರಿವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮಂಗಳವಾರ ಬೆಳಗ್ಗೆಯಿಂದ ಹಂತಹಂತವಾಗಿ 1 ಲಕ್ಷದವರೆಗೆ ನೀರನ್ನು ಬಿಡುಗಡೆ ಮಾಡಲಾಯಿತು. ಹೀಗಾಗಿ ಗೊರೂರಿನ ಯೋಗ ನರಸಿಂಹಸ್ವಾಮಿ ದೇವಾಲಯ ಆವರಣ ಜಲಾವೃತಗೊಂಡಿದೆ. ಹೊಳೆನರಸೀಪುರ ಪಟ್ಟಣದ ಮಾರುಕಟ್ಟೆ ರಸ್ತೆಯೂ ಸಂಪೂರ್ಣ ಜಲಾವೃತಗೊಂಡು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಅಷ್ಟೇ ಅಲ್ಲದೇ ಪಟ್ಟಣದ ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ. ಅಲ್ಲದೇ ಸಾವಿರ ಹೆಕ್ಟೇರ್ ಪ್ರದೇಶ ನೀರಿನಲ್ಲಿ ಮುಳುಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡುಗಡೆ ಮಾಡುತ್ತಿರುವುದರಿಂದ ನದಿ ಪಾತ್ರದ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಜಲಾಶಯದ ಸಹಾಯಕ ಇಂಜಿನಿಯರ್ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net