

ಚನ್ನರಾಯಪಟ್ಟಣ: ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 13 ವರ್ಷಗಳಿಂದ ಒಂದೇ ಆಡಳಿತ ಮಂಡಳಿ ಇದ್ದು, ಅವ್ಯವಹಾರದಲ್ಲಿ ತೊಡಗಿದೆ ಎಂದು ಆರೋಪಿಸಿ ರೈತರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜಂಟಿಯಾಗಿ ತಾಲೂಕಿನ ಶ್ರೀನಿವಾಸಪುರದ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ಬೆಂಬಲ ಸೂಚಿಸಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ ಮಾತನಾಡಿ, 13 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಆಡಳಿತ ಮಂಡಳಿ ಕೋಟ್ಯಂತರ ಹಣ ಲೂಟಿ ಮಾಡಿದೆ. ರೈತರು ಹಾಗೂ ಷೇರುದಾರರ ಹಿತ ಕಾಯಬೇಕಾದ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಮನಸೋ ಇಚ್ಛೆ ಕೋಟ್ಯಂತರ ರೂ. ಹಣ ದುರುಪಯೋಗ ಮಾಡಿದೆ. ಹಣಕಾಸಿನ ವ್ಯವಹಾರದ ಕುರಿತಾಗಿ ಜಮಾ ಖರ್ಚಿನ ವಿವರ ಸೇರಿ ಯಾವುದೇ ದಾಖಲೆಗಳನ್ನು ನೀಡುತ್ತಿಲ್ಲ. ಕಾರ್ಖಾನೆ ಸ್ವಂತ ಆಸ್ತಿಯಾಗಿದೆ. ಕಾರ್ಖಾನೆ ಸಾಮಾನ್ಯ ಸಭೆಯಲ್ಲಿ ಜನರನ್ನು ಸೇರಿಸಿ ಕೂಗಾಡಿ ಸಭೆಯನ್ನು ತರಾತುರಿಯಲ್ಲಿ ಮುಗಿಸುವ ಹುನ್ನಾರ ಪ್ರತಿವರ್ಷ ನಡೆಯತ್ತಿದೆ. ನಾಮ್‌ಕೆವಾಸ್ತೆಗೆ ಅಧ್ಯಕ್ಷರು ಇದ್ದು, ಶಾಸಕರೇ ನಿರ್ದೇಶಕರಾಗಿ ಹಣವನ್ನು ಬೇಕಾಬಿಟ್ಟಿ ವ್ಯಯಿಸಿದ್ದಾರೆ. ನಾಲ್ಕು ದಿನದಲ್ಲಿ ಖರ್ಚಾದ ಹಣಕ್ಕೆ ಲೆಕ್ಕ ನೀಡದಿದ್ದರೆ ಶಾಸಕರಿಗೆ ಘೇರಾವ್ ಹಾಕಬೇಕಾಗುತ್ತದೆ ಎಚ್ಚರಿಸಿದರು.
ಕೇಳಿದ ದಾಖಲೆ ಕೊಡದೆ ಕಾಲಹರಣ ಮಾಡಲಾಗುತ್ತಿದೆ. ನಾವು ಕೇಳಿರುವ ದಾಖಲೆಗಳನ್ನು ಮೂರ‌್ನಾಲ್ಕು ದಿನಗಳಲ್ಲಿ ನೀಡದಿದ್ದರೆ ನಿರಂತರ ಧರಣಿಗೆ ಮುಂದಾಗಬೇಕಾಗುತ್ತದೆ. ಕಾರ್ಖಾನೆ ಎಂಡಿ ಮಂಡ್ಯದಲ್ಲಿ ಕುಳಿತು ಆಕ್ರಮದ ಪಾಲು ಪಡೆದು ರೈತರ ಏಳಿಗೆಗೆ ಶ್ರಮಿಸದೆ ಆಡಳಿತ ಮಂಡಳಿ ಕೈಗೊಂಬೆಯಾಗಿದ್ದಾರೆ. ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿರುವ ಶಾಸಕರು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ನೀಡಿದ ಸಾಲಕ್ಕೆ ಕರಾರುವಕ್ಕಾಗಿ ಬಡ್ಡಿ ಪಡೆಯುತ್ತಿದ್ದಾರೆ. ಇಲ್ಲಿನ ಆಡಳಿತ ಮಂಡಳಿ ನಿರ್ದೇಶಕರಾಗಿ ಚಾಮುಂಡೇಶ್ವರಿಯವರಿಂದ ಬರಬೇಕಾದ ಗುತ್ತಿಗೆ ಹಣಕ್ಕೆ ಬಡ್ಡಿ ಇರಲಿ, ಬಾಕಿಯನ್ನೇ ಕಟ್ಟಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಜಿಪಂ ಮಾಜಿ ಸದಸ್ಯ ಶ್ರೇಯಸ್ ಪಟೇಲ್ ಮಾತನಾಡಿ, ಸಂವಿಧಾನಕ್ಕೆ ವಿರುದ್ಧವಾಗಿ ಕಾರ್ಖಾನೆಯಲ್ಲಿ ಆಡಳಿತ ನಡೆಯುತ್ತಿದೆ. ಯಾವುದೋ ಪಕ್ಷದ, ಕುಟುಂಬದ ಹಿತಕ್ಕಾಗಿ ಕಾರ್ಖಾನೆ ಇದೆ ಎಂಬಂತಿದೆ. ನಾವು ಕೇಳಿರುವ ದಾಖಲೆಗಳನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಖಾನೆ ಮಾಜಿ ನಿರ್ದೇಶಕ ಶಿವರಾಂ ಮಾತನಾಡಿ, ಮುಂದಿನ ಸಾಮಾನ್ಯ ಸಭೆಗೆ ಚಾಮುಂಡೇಶ್ವರಿ ಷುಗರ್ಸ್‌ನ ಎಂಡಿ ಶ್ರೀನಿವಾಸನ್ ಪಾಲ್ಗೊಳ್ಳದಿದ್ದಲ್ಲಿ ಸಭೆ ನಡೆಯಲು ಬಿಡುವುದಿಲ್ಲ. ಆದೇ ರೀತಿ ಆಡಳಿತ ಮಂಡಳಿ ಎಂಡಿ ಆಗಮಿಸಿ ನಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಒತ್ತಾಯಿಸಿದರು.
ಕಾರ್ಖಾನೆ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ನೀವು ಕೇಳಿರುವ ದಾಖಲೆಗಳನ್ನು ನೀಡುವಂತೆ ಎಂಡಿ ಅವರಿಗೆ ಸೂಚನೆ ನೀಡಲಾಗಿದೆ. ಉಸ್ತುವಾರಿ ಸಚಿವರೊಂದಿಗೆ ಸಭೆ ಇದ್ದ ಅವರು ಇಲ್ಲಿಗೆ ಬಂದಿಲ್ಲ. ಕೆಲ ಮಾಹಿತಿಗಳನ್ನು ನೀಡಿದ್ದಾರೆ. ಮಿಕ್ಕ ದಾಖಲೆಗಳನ್ನು ಸಾಮಾನ್ಯ ಸಭೆಯಲ್ಲಿ ನೀಡುವುದರ ಜತೆಗೆ ಅಂದು ಮುಕ್ತವಾಗಿ ಅವರೊಂದಿಗೆ ಚರ್ಚಿಸಲು ಅವಕಾಶ ಮಾಡಿಕೊಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಮುಖಂಡರಾದ ಎನ್.ಡಿ.ಕಿಶೋರ್, ಜಗದೀಶ್, ವೆಂಕಟರಾಮೇಗೌಡ, ಅಮರಣ್ಣ, ದಿನೇಶ್, ಸತೀಶ್, ಗಿರೀಶ್, ನಲ್ಲೂರು ವಿಶ್ವನಾಥ್, ಚಿಕ್ಕಬಿಳ್ತಿ ಪ್ರಕಾಶ್ ಭಾಗವಹಿಸಿದ್ದರು.