ಹೇಮಾವತಿ ಸಂತ್ರಸ್ತರಿಗೆ ಇಂದಿಗೂ ಸಿಗದ ಭೂ ದಾಖಲಾತಿ:ಹೋರಾಟದ ಎಚ್ಚರಿಕೆ

ಹೇಮಾವತಿ ಸಂತ್ರಸ್ತರಿಗೆ ಇಂದಿಗೂ ಸಿಗದ ಭೂ ದಾಖಲಾತಿ:ಹೋರಾಟದ ಎಚ್ಚರಿಕೆ
Published on

ಹಾಸನ: ಹೇಮಾವತಿ ಜಲಾಶಯಕ್ಕೆ ಭೂಮಿ ಕಳೆದುಕೊಂಡ ಸುಮಾರು 10 ಸಾವಿರ ಕುಟುಂಬಗಳು 1970ರಿಂದ ಹೋರಾಟ ಮಾಡಿಕೊಂಡು ಬಂದಿದ್ದರೂ ಕೂಡ ಇದುವರೆಗೂ ಅವರಿಗೆ ಸರಿಯಾದ ಭೂ ದಾಖಲಾತಿಗಳನ್ನು ಮಾಡಿಕೊಡುವಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರಗಳು ವಿಫಲವಾಗಿದೆ. ಭೂ ದಾಖಲಾತಿ ಮಾಡಿಕೊಡದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಹೇಮಾವತಿ ಜಲಾಶಯ ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಎಸ್. ಕೃಷ್ಣ ಎಚ್ಚರಿಸಿದರು.

ಹೇಮಾವತಿ ಜಲಾಶಯಕ್ಕೆ ಆಲೂರು, ಅರಕಲಗೂಡು, ಹಾಸನ, ಸಕಲೇಶಪುರ ತಾಲ್ಲೂಕಿನ 40 ಗ್ರಾಮಗಳು ಮುಳುಗಡೆಗೊಂಡು ಅವರನ್ನು ಬೇರೆ ಬೇರೆ ಕಡೆಗೆ ಸ್ಥಳಾಂತರಿಸಲಾಯಿತು. ಹೆಚ್ಚಿನ ರೈತರು ಆಲೂರು ತಾಲ್ಲೂಕಿನಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಅವರಿಗೆ ಮಂಜೂರಾಗಿರುವ ಭೂಮಿಗಳ ಸಾಗುವಳಿ ಚೀಟಿಯನ್ನು ಹೊರತುಪಡಿಸಿದರೆ ಇನ್ಯಾವುದೇ ದಾಖಲಾತಿಗಳನ್ನು ಮಾಡಿಕೊಟ್ಟಿಲ್ಲ. ಈ ಬಗ್ಗೆ ಸಾಕಷ್ಟು ಹೋರಾಟಗಳು, ಸರ್ಕಾರಕ್ಕೆ ಮನವಿ ಪತ್ರಗಳನ್ನು ಸಲ್ಲಿಸಿದರೂ ಕೂಡ ಯಾರೂ ಗಮನ ಹರಿಸುತ್ತಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಲಕ್ಷಾಂತರ ಜನರ ಅನುಕೂಲಕ್ಕಾಗಿ ಮನೆ- ಮಠ, ಜಮೀನನ್ನು ಕಳೆದುಕೊಂಡು ನಿರ್ಗತಿಕರಾಗಿದ್ದ ಜನರು ಈಗ ಎಲ್ಲೋ ಒಂದು ಕಡೆ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಮಂಜೂರಾಗಿರುವ ಭೂಮಿಗೆ ಪೋಡಿ, ಖಾತೆ, ಪಹಣಿ ಮಾಡಿಕೊಡುವುದು ಕಂದಾಯ ಇಲಾಖೆಯ ಕರ್ತವ್ಯವಾಗಿದೆ. ಬೆರಳೆಣಿಕೆ ಜನರಿಗೆ ಭೂ ದಾಖಲಾತಿ ಆಗಿದೆ. ಆದರೆ ಉಳಿದವರು ಇಂದಿಗೂ ಕೂಡ ತಲೆಮಾರುಗಳಿಂದ ತಾಲ್ಲೂಕು ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿಗಳಿಗೆ ಅಲೆದರೂ ಭೂ ದಾಖಲಾತಿ ಮಾಡಿಕೊಡಲಾಗಿಲ್ಲ ಎಂದು ದೂರಿದರು.

ಸರ್ಕಾರದಿಂದ ಸುತ್ತೋಲೆ ಮತ್ತು ಆದೇಶಗಳಿವೆ. ಆದರೂ ಅದಕ್ಕೆ ಕಿಮ್ಮತ್ತು ನೀಡುತ್ತಿಲ್ಲ. ಅಧಿಕಾರಕ್ಕೆ ಬಂದಂತಹ ಸಚಿವರು ಮತ್ತು ಸರ್ಕಾರದವರೂ ಕೂಡ ನಾಮ್‌ಕೇವಾಸ್ತೆಗೆ ಬಂದು ಹೋಗುತ್ತಿದ್ದಾರೆ. ಯಾರೂ ಕೂಡ ಶಾಶ್ವತ ಪರಿಹಾರವನ್ನು ಮಾಡಿಕೊಟ್ಟಿಲ್ಲ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದರ ಜತೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹೇಮಾವತಿ ಜಲಾಶಯ ಸಂತ್ರಸ್ತರ ಹೋರಾಟ ಸಮಿತಿಯ ಸದಸ್ಯರಾದ ವೆಂಕಟರಾಮು, ರಾಜೇಗೌಡ, ಚಂದ್ರಶೇಖರ್, ಹೇಮಪ್ರಸಾದ್, ಪ್ರಗತಿಪರ ಚಿಂತಕ ಆರ್.ಪಿ.ವೆಂಕಟೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net