ಹೇಮಾವತಿ ನದಿ ನೀರಿಗಾಗಿ ಭುಗಿಲೆದ್ದ ಆಕ್ರೋಶ:ರೇವಣ್ಣ ನೇತೃತ್ವದಲ್ಲಿ ಡಿಸಿ ಕಚೇರಿಯ ಎದುರು ಪ್ರತಿಭಟನೆ

ಹೇಮಾವತಿ ನದಿ ನೀರಿಗಾಗಿ ಭುಗಿಲೆದ್ದ ಆಕ್ರೋಶ:ರೇವಣ್ಣ ನೇತೃತ್ವದಲ್ಲಿ ಡಿಸಿ ಕಚೇರಿಯ ಎದುರು ಪ್ರತಿಭಟನೆ
Published on

ಹಾಸನ: ಹೇಮಾವತಿ ಜಲಾಶಯದಿಂದ ಶುಕ್ರವಾರ ಸಂಜೆ 5 ಗಂಟೆ ಒಳಗೆ ಜಿಲ್ಲೆಯ ರೈತರಿಗೆ ನೀರು ಕೊಡದಿದ್ದರೆ ಮುಂದೆ ನಡೆಯುವಂತಹ ಅನಾಹುತಗಳಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಎಚ್ಚರಿಕೆ ನೀಡಿದರು.
ಹೇಮಾವತಿ ಜಲಾಶಯದಿಂದ ನಾಲೆಯ ಮೂಲಕ 144 ಸೆಕ್ಷನ್ ಹಾಕಿ ತುಮಕೂರಿಗೆ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ರೇವಣ್ಣ, ಶುಕ್ರವಾರ ನೀರು ಹರಿಸದಿದ್ದರೆ ನಾಲೆಯಲ್ಲಿರುವಂತಹ ತೂಬುಗಳಿಂದ ಜೆಸಿಬಿ ಮೂಲಕ ಕಿತ್ತು ಹಾಕಲಾಗುವುದು ಮತ್ತು ಹೇಮಾವತಿ ಜಲಾಶಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ದೊಡ್ಡಳ್ಳಿ ಗೋಲಿಬಾರ್‌ನಂತಹ ಪ್ರಕರಣಗಳು ನಡೆದಿವೆ. ಅಲ್ಲದೆ ಇಂದಿನಿಂದ ಪ್ರತಿ ತೂಬಿಗೆ 500 ಜನ ರೈತರು ನಿಂತು ತೂಬನ್ನು ಜೆಸಿಬಿ ಮೂಲಕ ಒಡೆದು ಹಾಕಲಾಗುವುದು. ಇದನ್ನು ತಡೆಯಲು ಯಾರು ಬರುತ್ತಾರೆ ನೋಡೋಣ ಸವಾಲು ಹಾಕಿದ ರೇವಣ್ಣ ಜಿಲ್ಲೆಯಲ್ಲಿ ಏನಾದರೂ ಅನಾಹುತ ನಡೆದರೆ ಅದಕ್ಕೆ ಡಿಸಿ, ಎಸ್ಪಿ ಕಾರಣ ಆಗಿರುತ್ತಾರೆ ಎಂದು ಹೇಳಿದರು
ಇಂದಿರಾಗಾಂಧಿ ದೇಶಕ್ಕೆ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದರು. ಈಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ತುಮಕೂರಿಗೆ ನೀರು ತೆಗೆದುಕೊಂಡು ಹೋಗಲು ತುರ್ತು ಪರಿಸ್ಥಿತಿ ಏರಿದ್ದಾರೆ. ಪೊಲೀಸರ ಸರ್ಪಗಾವಲಿನಲ್ಲಿ ನೀರು ತೆಗೆದುಕೊಂಡು ಹೋಗುವಂತಹ ಪರಿಸ್ಥಿತಿ ಜಿಲ್ಲಾಡಳಿತಕ್ಕೆ ಬಂದಿದೆ. ಕಳೆದೆರಡು ದಿನಗಳಿಂದ ಹೇಮಾವತಿ ಜಲಾಶಯದಿಂದ ನಾಲೆ ಮೂಲಕ ನೀರನ್ನು ಹರಿಸಲಾಗುತ್ತಿದೆ. ಈಗಾಗಲೇ ಸರ್ಕಾರದಿಂದ ತುಮಕೂರಿಗೆ 2 ಟಿಎಂಸಿ ನೀರನ್ನು ಹರಿಸುವಂತೆ ಆದೇಶ ಮಾಡಲಾಗಿದೆ. ಈ ಆದೇಶದ ಅನುಗುಣವಾಗಿ ನಾಲೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ ಎಂದರು.
ಇದನ್ನು ಕೇಳಲು ಜಿಲ್ಲಾಧಿಕಾರಿ ಬಳಿಗೆ ಹೋದರೆ ಜನಪ್ರತಿನಿಧಿ ಎಂಬುದನ್ನು ಲೆಕ್ಕಿಸದೆ ನಮ್ಮ ಮೇಲೆಯೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡುತ್ತಾರೆ. ಇವರ ಆಡಳಿತ ನಿಜಕ್ಕೂ ಖಂಡನೀಯ. ಈ ತರದ ಆದೇಶವನ್ನು ನನ್ನ ರಾಜಕಾರಣದ ಇತಿಹಾಸದಲ್ಲಿ ನೋಡಿರಲಿಲ್ಲ. ಈ ರೀತಿ ಆದೇಶವನ್ನು ಮಾಡುವಂತೆ ಯಾರು ಅವರಿಗೆ ಡ್ರಾಫ್ಟ್ ಹಾಕಿಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಕುಡಿಯುವ ನೀರಿಗೆ ಕಾಂಗ್ರೆಸ್‌ನವರು ಎಮರ್ಜೆನ್ಸಿ ಹೇರಿದ್ದಾರೆ. ಇದು ದುರಾದೃಷ್ಟಕರ, ದೇವೇಗೌಡರು ಇರಲಿಲ್ಲ ಎಂದರೆ ತುಮಕೂರಿಗೆ ನೀರು ಹರಿಯುತ್ತಿರಲಿಲ್ಲ. ತುಮಕೂರಿಗೆ ನೀರು ಹರಿಸಲು ಜಿಲ್ಲೆಯ ರೈತರು ಜಮೀನು ಕಳೆದುಕೊಂಡಿದ್ದಾರೆ. ನೀರಾವರಿ ಸಲಹಾ ಸಮಿತಿ ಸಭೆ ಮಾಡದೇ ನೀರು ಬಿಟ್ಟಿದ್ದಾರೆ. ಇವರಿಗೆ ನಾಚಿಕೆಯಾಗಬೇಕು ಎಂದರು.

ನಮಗೂ ನೀರು ಕೊಡಿ ಎಂದ ಪ್ರಜ್ವಲ್
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಸರ್ಕಾರದ ಈ ನಡೆ ನಿಜಕ್ಕೂ ಜಿಲ್ಲೆಯ ಜನರ ಸಿಟ್ಟಿಗೆ ಕಾರಣವಾಗಿದೆ. ತುಮಕೂರಿಗೆ ನೀರು ಕೊಡುವುದನ್ನು ಯಾರು ಕೂಡ ವಿರೋಧಿಸುವುದಿಲ್ಲ. ಆದರೆ ಉಳಿದಿರುವ ಒಂದೂವರೆ ಟಿಎಂಸಿ ನೀರನ್ನು ಜಿಲ್ಲೆಯ ಜನರಿಗೆ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಸ್ಥಳೀಯ ಶಾಸಕರು ಮತ್ತು ಸಂಸದರ ಸಭೆ ಕರೆದು ನೀರನ್ನು ಹರಿಸಿದ್ದರೆ ನಾವು ಸ್ವಾಗತ ಮಾಡುತ್ತಿದ್ದೆವು. ಆದರೆ ಈ ರೀತಿ ಪೊಲೀಸರನ್ನು ಸರ್ಪಗಾವಲು ಹಾಕಿ ನೀರು ಹರಿಸುವುದು ಸರಿಯಲ್ಲ. ಜಿಲ್ಲೆಯ ರೈತರಿಗೆ ಇನ್ನೂ ಎಷ್ಟು ದಿನ ನೋವು ಕೊಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಸಿಎಂ ಬಾಲಕೃಷ್ಣ ಮಾತನಾಡಿ, ಜಿಲ್ಲೆಯ ರೈತರು ಕಣ್ಣೀರು ಹಾಕುವ ಬದಲು ರಕ್ತ ಹರಿಸುತ್ತಿದ್ದಾರೆ. ಪೊಲೀಸರ ಭದ್ರತೆಯಲ್ಲಿ ನೀರು ತೆಗೆದುಕೊಳ್ಳುವಂತಹ ಪರಿಸ್ಥಿತಿ ಸರ್ಕಾರಕ್ಕೆ ಬಂದಿದೆಯೇ? ಜಿಲ್ಲೆಯ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಜಿಲ್ಲೆಯ ರೈತರ ಹಿತ ಕಾಪಾಡದೇ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಹಾಸನ ನಗರಸಭೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಅಲ್ಲದೆ ನಗರಸಭೆಗೆ 25 ಹಳ್ಳಿಗಳು ಸೇರ್ಪಡೆಯಾಗಿರುವುದರಿಂದ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಆದರೆ ಸರಿಯಾದ ನೀರು ಇಲ್ಲದೆ ಇದ್ದರೂ ಕೂಡ ತುಮಕೂರಿಗೆ ನೀರು ಬಿಡಲಾಗುತ್ತಿದೆ ಎಂದು ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ವಕ್ತಾರ ರಘು ಹೊಂಗೆರೆ, ಎಪಿಎಂಸಿ ಉಪಾಧ್ಯಕ್ಷ ದೇವರಾಜು, ಮುಖಂಡರಾದ ಜಯರಾಮ, ಸ್ವಾಮಿಗೌಡ, ಶೇಷಾದ್ರಿ, ಶಂಕರ್ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಡಿಸಿ ಕಚೇರಿಗೆ ಪೊಲೀಸರ ಸರ್ಪಗಾವಲು
ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ಮತ್ತು ಸಂಸದರು ಪ್ರತಿಭಟನೆ ನಡೆಸುತ್ತಾರೆ ಎಂಬ ವಿಷಯ ತಿಳಿದು ಜಿಲ್ಲಾಧಿಕಾರಿಗಳ ಕಚೇರಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿಭಟನೆಗೆ ಆಗಮಿಸಿದ ಜನರಿಗಿಂತ ಪೊಲೀಸರ ಸಂಖ್ಯೆಯೇ ಹೆಚ್ಚಾಗಿದ್ದು ಕಂಡು ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net