ಹೇಮಾವತಿ ಡ್ಯಾಂನಿಂದ 11.50 ಟಿಎಂಸಿ ನೀರು ಬಿಡುಗಡೆ

ಹೇಮಾವತಿ ಡ್ಯಾಂನಿಂದ 11.50 ಟಿಎಂಸಿ ನೀರು ಬಿಡುಗಡೆ
Published on

   ಹಾಸನ: ಕಾವೇರಿ ಸಂಕಷ್ಟ ದಿನ ನೋಡುತ್ತಲೇ ಇದ್ದೇವೆ. ಹೇಮಾವತಿ ಜಲಾಶಯಕ್ಕೆ 32.50 ಟಿಎಂಸಿ ನೀರು ಬಂದಿದೆ. 11.50 ಟಿಎಂಸಿ ನೀರು ಬಿಟ್ಟಿದ್ದಾರೆ ಎಂದು ಶಾಸಕ ಎಚ್.ಡಿ. ರೇವಣ್ಣ ಅವರು ಆರೋಪಿಸಿದರು.

ನಗರದ ಸಂಸದರ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆ ವಿಚಾರವನ್ನು ಸರ್ಕಾರ ಈವರೆಗೆ ಸ್ಪಷ್ಟಪಡಿಸಿಲ್ಲ. ಹೇಮಾವತಿ ಜಲಾಶಯದಿಂದ ಹೊರ ಬಿಡಲಾದ 11.50 ಟಿಎಂಸಿ ನೀರಿನ ಪೈಕಿ ರೈತರಿಗೆ, ನಾಲೆಗಳಿಗೆ, ಕುಡಿಯಲು, ಕೆರೆ ತುಂಬಿಸಲು ಎಷ್ಟು ಬಿಟ್ಟಿದ್ದೀರಿ ಎಂದು ವಿವರವಾಗಿ ಹೇಳಬೇಕಲ್ಲವೇ ಎಂದು ಪ್ರಶ್ನಿಸಿದರು.

ಸರ್ಕಾರ ಯಾವ ಲಕ್ಷೀ ಬೇಕೋ, ಯಾವ ಗ್ಯಾರಂಟಿ ಬೇಕೋ ಜಾರಿ ಮಾಡಿಕೊಳ್ಳಲಿ. ಆದರೆ, ಬರದ ಛಾಯೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಕೂಡಲೇ ಧಾವಿಸಲಿ. ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಚರ್ಚೆ ನಡೆಸಿ ರಾಜ್ಯದ ರೈತರ ಹಿತ ಕಾಯುವುದು ಸರ್ಕಾರ ಕರ್ತವ್ಯವಾಗಬೇಕು. ರೈತರ ಜಮೀನುಗಳಿಗೆ ನೀರು ಕೊಡಲು ಸಾಧ್ಯವಾಗದೇ ಇದ್ದರೆ ಈ ವರ್ಷ ಯಾರೂ ಬೆಳೆ ಬೆಳೆಯುವುದು ಬೇಡ, ಸಂಪೂರ್ಣ ಪರಿಹಾರ ನಾವೇ ಹಂಚಿಕೆ ಮಾಡುತ್ತೇವೆ ಎಂಬುದನ್ನಾದರೂ ಘೋಷಿಸಲಿ ಎಂದರು.

ಜಿಲ್ಲೆಯ ರೈತರು ಕಷ್ಟಪಟ್ಟು ಬೆಳೆದ ಮೆಕ್ಕೆಜೋಳ ಸಂಪೂರ್ಣ ಒಣಗಿ ಹೋಗುತ್ತಿದ್ದು ರೈತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳಿದ ಬೆಳೆಗಳೂ ಮಳೆ ಕೊರತೆಯಿಂದ ಭೂಮಿಯಲ್ಲೇ ಸೊರಗಿ ಹೋಗುತ್ತಿವೆ. ಇದೆಲ್ಲವನ್ನೂ ಪರಿಗಣಿಸಿ ನಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗು ಕೃಷಿ ಸಚಿವರು ಕೂಡಲೇ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಅನ್ನಭಾಗ್ಯ ನೀಡುತ್ತೇವೆ ಎಂದು ಹೇಳಿ 3 ಕೆ.ಜಿ ಅಕ್ಕಿ ಜತೆಗೆ 2 ಕೆಜಿ ರಾಗಿ ನೀಡುತ್ತಿದ್ದಾರೆ. ಆದರೆ ಅವರು ಕೊಡುವ ಕಲ್ಲು, ಮಣ್ಣಿರುವ ರಾಗಿ ತಿಂದರೆ ವಾಂತಿ, ಭೇದಿಯಾಗಿ ಆಸ್ಪತ್ರೆಗೆ ಹಣ ಸುರಿಯಬೇಕಾಗುತ್ತದೆ ಎಂಬ ಕಾರಣಕ್ಕೆ ಜನರು ರಾಗಿಯನ್ನು ಅಲ್ಲೇ ಬಿಟ್ಟು ಹೋಗುತ್ತಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶ ಬಂದು ನಾಲ್ಕು ತಿಂಗಳಾದರೂ ಪದವಿ ತರಗತಿಗಳ ಪ್ರವೇಶಾತಿ ಆರಂಭವಾಗಿಲ್ಲ. ಕಾರ್ಮಿಕರಿಗೆ ವಿವಿಧ ಯೋಜನೆಗಳಡಿ ಪರಿಕರ ವಿತರಿಸಲು ಹಣವೇ ಕೊಟ್ಟಿಲ್ಲ. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಈಗಿನ ಸರ್ಕಾರದಲ್ಲಿ ಭ್ರಷ್ಟಾಚಾರವಿಲ್ಲದ ಒಳ್ಳೊಳ್ಳೆ ಮಂತ್ರಿಗಳಿದ್ದಾರೆ. ಅವರ ಕಾಲದಲ್ಲೇ ಹೀಗೆ ಆದರೆ ಹೇಗೆ ಎಂದು ಮಾರ್ಮಿಕವಾಗಿ ಹೇಳಿದರು.

ನರೇಗಾ ಹಣ ನೀಡಿ

ನರೇಗಾ ಯೋಜನೆಯಡಿ ಕೇಂದ್ರದಿಂದ 120 ಕೋಟಿ ರೂ. ಬಂದಿದ್ದರೂ ಇದುವರೆಗೂ ರಾಜ್ಯ ಸರಕಾರವು ಹಣ ಬಿಡುಗಡೆ ಮಾಡಿಲ್ಲ. ಇದರಿಂದ ದಿನಗೂಲಿ ಮಾಡಿದ ಜನರು ಕೂಲಿ ಸಿಗದೇ ಪರಿತಪಿಸುವ ಸ್ಥಿತಿ ಬಂದಿದೆ. ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಆರು ತಿಂಗಳಿನಿಂದ ಪ್ರತಿನಿತ್ಯ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ಮಾಡುವವರಿಗೆ ಹಣ ಬಿಡುಗಡೆ ಮಾಡಿಲ್ಲದೆ ಇರುವುದಕ್ಕೆ ಕಾರಣ ಏನು? ದಯಮಾಡಿ ಕೂಡಲೇ ಹಣ ಬಿಡುಗಡೆ ಮಾಡಬೇಕು. ನಮ್ಮ ಜಿಲ್ಲೆಯೊಂದಕ್ಕೇ 120 ಕೋಟಿ ರೂ. ಕೊಡಬೇಕು. ವಿವಿಧ ಇಲಾಖೆಯ ಮೆಟೀರಿಯಲ್ಸ್ ಬಾಕಿ 108 ಕೋಟಿ ರೂ. ಬಿಡುಗಡೆಯಾಗಿದ್ದು ಅದನ್ನೂ ನೀಡಿಲ್ಲ. ಹಣ ಕೊಡದೆ ಇರಲು ಕಾರಣ ಏನು ಎಂಬುದನ್ನು ಸರ್ಕಾರ ಹೇಳಬೇಕು ಎಂದು ಒತ್ತಾಯಿಸಿದರು.

ನೈಸ್ ಅಕ್ರಮ ತನಿಖೆ ಸಿಬಿಐ ವಹಿಸಿ

ನೈಸ್ ಅಕ್ರಮದಲ್ಲಿ ನಮ್ಮ ಕುಟುಂಬದವರು ಭಾಗಿಯಾಗಿದ್ದರೆ ಸಿಬಿಐ ತನಿಖೆಗೆ ವಹಿಸಲಿ ಎಂದು ಹೆಚ್.ಡಿ.ರೇವಣ್ಣ ಸವಾಲು ಹಾಕಿದರು. ಬಿಜೆಪಿ ಸರ್ಕಾರದ ಮೇಲೆ 40 ಪಸೆರ್ಂಟ್ ಕಮೀಷನ್ ಆರೋಪ ಇತ್ತು. ಅವರು ತನಿಖೆಗೆ ಆದೇಶ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಹೇಳಲ್ಲ. ಆದರೆ ಅವರದೇ ಪಕ್ಷದ ಟಿ.ಬಿ.ಜಯಚಂದ್ರ ಅವರು ಸದನ ಸಮಿತಿ ವರದಿ ನೀಡಿದ್ದಾರೆ. ಅದರ ಆಧಾರದ ಮೇಲೆ ಇವರು ಪ್ರಾಮಾಣಿಕರಾಗಿದ್ದರೆ ಸಮಗ್ರ ತನಿಖೆ ಮಾಡಿಸಲಿ, ಹೆದರಿಕೆ ಏಕೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net