ಹೇಮಾವತಿ ಜಲಾಶಯದಿಂದ ತುಮಕೂರಿಗೆ 2 ಟಿಎಂಸಿ ನೀರು

ಹೇಮಾವತಿ ಜಲಾಶಯದಿಂದ ತುಮಕೂರಿಗೆ 2 ಟಿಎಂಸಿ ನೀರು
Published on

ಹಾಸನ: ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ಕುಡಿಯುವ ನೀರಿಗಾಗಿ ನೀರು ಹರಿಸಲು ಆದೇಶ ಮಾಡಲಾಗಿದೆ. ಹೀಗಾಗಿ ಮಂಗಳವಾರ ಎಡದಂಡೆ ನಾಲೆ ಮೂಲಕ ಹೇಮೆ ನೀರು ತುಮಕೂರಿಗೆ ಸುಮಾರು 2 ಟಿಎಂಸಿಯಷ್ಟು ಹರಿಯಲಿದೆ. ಈ ಕುರಿತು ಹೇಮಾವತಿ ಜಲಾಶಯ ಯೋಜನೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಹಾಗೂ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಜಿ.ಕೆ.ಜ್ಯೋತಿ ಆದೇಶ ಮಾಡಿದ್ದಾರೆ.
ತುಮಕೂರು ವ್ಯಾಪ್ತಿಯ ತುಮಕೂರು ಶಾಖಾ ನಾಲೆಯಿಂದ ಬುಡುಗನಹಳ್ಳಿ ಜಲ ಸಂಗ್ರಹಾರ ಹಾಗೂ ಇತರೆ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಜಲ ಸಂಗ್ರಹಾರದಲ್ಲಿ ಲಭ್ಯ ಇರುವ ನೀರಿನ ಪ್ರಮಾಣ ಕಡಿಮೆ ಇದೆ. ಬಹುತೇಕ ನೀರು ಖಾಲಿಯಾಗಿದೆ. ಹೀಗಾಗಿ ನಿನ್ನೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಬಳಕೆ ಮಾಡುವ ನೀರಿನ ಲಭ್ಯ ನೋಡಿಕೊಂಡು ಈ ನಿರ್ಣಯ ಮಾಡಲಾಗಿದ್ದು, ತುಮಕೂರು ನಾಲಾ ವಲಯಕ್ಕೆ ಕುಡಿಯುವ ನೀರಿಗಾಗಿ ಸುಮಾರು 2 ಟಿಎಂಸಿ ನೀರು ಹರಿಸಲು ಮಾನ್ಯ ಅಧ್ಯಕ್ಷರು ತಿಳಿಸಿದ್ದಾರೆ ಎಂದಿದ್ದಾರೆ.
ಪ್ರಸ್ತುತ ಬರಗಾಲ ಇರುವುದರಿಂದ ನೀರಿನ ಅಭಾವವಿದ್ದು, ಹಾಲಿ ಇರುವ ನೀರನ್ನು ಅಚ್ಚುಕಟ್ಟು ವ್ಯಾಪ್ತಿಯ ಯಾವುದೇ ಕೃಷಿ ಚಟುವಟಿಕೆಗಳಿಗೆ ಬಳಸುವ ಹಾಗಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಯೋಜನಾ ವ್ಯಾಪ್ತಿಯ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ನೀರು ಪೋಲಾಗದಂತೆ, ಎಲ್ಲಾ ತುರ್ತು ಕ್ರಮ ಕೈಗೊಂಡು, ಎಡದಂಡೆ ನಾಲೆಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಹಾಗೂ ರೈತರಿಗೆ ಸೂಕ್ತ ತಿಳುವಳಿಕೆ ನೀಡಿ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಈ ಸಂಬಂಧ ಅಚ್ಚುಕಟ್ಟುದಾರರು ಸೇರಿದಂತೆ ಎಲ್ಲರೂ ಅಧಿಕಾರಿಗಳೊಂದಿಗೆ ಸಹಕಾರ ನೀಡುವಂತೆ ಜ್ಯೋತಿ ಅವರು ಮನವಿ ಮಾಡಿದ್ದಾರೆ.

ಹೇಮೆಯಲ್ಲಿರುವ ನೀರೆಷ್ಟು:
2922 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಮಂಗಳವಾರ 888.12 ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2901.47 ಅಡಿ ನೀರಿತ್ತು. ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 37.103 ಟಿಎಂಸಿಗಳಾಗಿದ್ದು, ಸದ್ಯ 12.993 ಟಿಎಂಸಿ ಇದೆ. ಕಳೆದ ವರ್ಷ 20.662 ಟಿಎಂಸಿ ನೀರಿತ್ತು. 12 ಟಿಎಂಸಿ ನೀರಿನಲ್ಲಿ ಕೇವಲ 8.621 ಟಿಎಂಸಿ ನೀರನ್ನು ಮಾತ್ರ ಬಳಕೆ ಮಾಡಬಹುದಾಗಿದೆ. ಕಳೆದ ವರ್ಷ (16.290) ನೀರು ಆವಕ ಆಗಿತ್ತು. ಜಲಾಶಯಕ್ಕೆ ಒಳ ಹರಿವು ಕೇವಲ 36 ಕ್ಯುಸೆಕ್‌ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net