

ಹಾಸನ: ಜಲಾನಯನ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜೀವನದಿ ಹಾಗೂ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಗೊರೂರಿನ ಹೇಮಾವತಿ ಜಲಾಶಯ ಬಹುತೇಕ ಭರ್ತಿ ಹಂತ ತಲುಪಿದೆ.
ಕೆಲ ವರ್ಷಗಳ ನಂತರ ಹೇಮೆಯ ಒಡಲು ನೀರಿನಿಂದ ತುಂಬಿ ತುಳುಕುತ್ತಿದೆ. ಒಂದು ತಿಂಗಳ ಹಿಂದೆ ಬಹುತೇಕ ಖಾಲಿಯಾಗಿ ಭಣಗುಡುತ್ತಿದ್ದ ಜಲಾಶಯದಲ್ಲೀಗ ನೀರ ನರ್ತನ ಶುರುವಾಗಿದೆ. ಜೋರು ಮಳೆಯಿಂದ ಒಂದೇ ವಾರದಲ್ಲಿ ಹೇಮಾವತಿ ಜಲಾಶಯ ಭರ್ತಿ ಹಂತಕ್ಕೆ ಬಂದಿರುವುದು, ಇದನ್ನೇ ನಂಬಿರುವ ನಾಲ್ಕು ಜಿಲ್ಲೆಗಳ ಲಕ್ಷಾಂತರ ಜನ-ಜಾನುಗಳಿಗೆ ಅತೀವ ಸಂತಸ ತರಿಸಿದೆ.
ಗರಿಷ್ಠ 2922 ಅಡಿ ಮಟ್ಟದ 37 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇಂದು 2916 ಅಡಿ ಜೊತೆಗೆ 31 ಟಿಎಂಸಿ ನೀರಿದೆ. ಜಲಾಶಯ ಒಡಲು ತುಂಬಿಕೊಳ್ಳಲು ಕೇವಲ 6 ಅಡಿ ಮಾತ್ರ ಬಾಕಿ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2894 ಅಡಿ ಹಾಗೂ 16 ಟಿಎಂಸಿ ನೀರಿತ್ತು.
ಇಂದು ಜಲಾಶಯಕ್ಕೆ 35,871 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಹೀಗೇ ಮುಂದುವರಿದರೆ ಶೀಘ್ರ ಭರ್ತಿಯಾಗಲಿದೆ.ಈ ಹಿನ್ನೆಲೆಯಲ್ಲಿ ಈಗಾಗಲೇ ನದಿ ಹಾಗೂ ಎಲ್ಲಾ ನಾಲೆಗಳಿಗೆ ನೀರು ಬಿಡಲಾಗುತ್ತಿದ್ದು, ಶೀಘ್ರವೇ ಆರು ಕ್ರಸ್ಟ್‌ಗೇಟ್‌ಗಳ ಮೂಲಕವೂ ನೀರು ಧುಮ್ಮಿಕ್ಕುವ ಸಾಧ್ಯತೆ ಇದೆ. ಈಗಾಗಲೇ ಯಾವುದೇ ಕ್ಷಣದಲ್ಲಾದರೂ ನೀರು ಹೊರ ಬಿಡುವ ಮುನ್ಸೂಚನೆ ನೀಡಲಾಗಿದೆ.