

ಹೊಳೆನರಸೀಪುರ: ಪಟ್ಟಣದ ಒಳಚರಂಡಿಯಲ್ಲಿ ಹರಿಯುವ ಮಲಮೂತ್ರವನ್ನು ಹೇಮಾವತಿ ನದಿಗೆ ಬಿಡಲಾಗುತ್ತಿದೆ. ಈ ಬಗ್ಗೆ ಪುರಸಭೆಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಲೋಕಾಯುಕ್ತರಿಗೆ ದೂರು ನೀಡಿದರು.
ತಾಲೂಕು ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಜನರು ಲೋಕಾಯುಕ್ತರಿಗೆ ವಿವಿಧ ಇಲಾಖೆಗಳ ಬಗ್ಗೆ ದೂರು ನೀಡಿದರು.
ಪಟ್ಟಣದಲ್ಲಿ ಒಳಚರಂಡಿ ನೀರನ್ನು ಎತ್ತಿ ಬೇರೆಡೆಗೆ ಬಿಡುವ ವ್ಯವಸ್ಥೆ ಹದಗೆಟ್ಟಿದ್ದು, ಒಳಚರಂಡಿಯಲ್ಲಿ ಹರಿಯುವ ಮಲಮೂತ್ರವನ್ನು ಪುರಸಭೆಯವರು ಹೇಮಾವತಿ ನದಿಗೆ ಬಿಡುತ್ತಿದ್ದಾರೆ ಎಂದು ದೂರಿದರು. ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಪರಿಸರ ಇಂಜಿನಿಯರ್ ರುಚಿದರ್ಶನಿ ಅವರನ್ನು ಈ ಬಗ್ಗೆ ಕೇಳಿದಾಗ, ಅವರು ಪರಿಶೀಲಿಸುತ್ತೇನೆ ಎಂದು ಉತ್ತರಿಸಿದರು.
ಇದರಿಂದ ಅಸಮಾಧಾನಗೊಂಡ ಲೋಕಾಯುಕ್ತರು ನೀವು ಪುರಸಭೆಗೆ ಬಂದು ಎಷ್ಟು ದಿನ ಆಯ್ತು? 2 ವರ್ಷದಿಂದ ಕೆಲಸ ಮಾಡುತ್ತಿದ್ದರೂ ಮಲಮೂತ್ರ ನದಿಗೆ ಬಿಡುತ್ತಿರುವ ಬಗ್ಗೆ ನಿಮಗೇ ಗೊತ್ತಿಲ್ಲ ಎಂದರೆ ನೀವು ಪುರಸಭೆಯಲ್ಲಿ ಹೇಗೆ ಕೆಲಸ ಮಾಡುತ್ತಿದ್ದೀರಿ ಎಂದು ತಿಳಿಯುತ್ತದೆ. ನದಿಗೆ ಮಲಮೂತ್ರ ಬಿಡುತ್ತಿದ್ದರೂ ಅದನ್ನು ತಡೆಯದಿರುವುದು ಅಪರಾಧ ಆಗುತ್ತದೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡದಿದ್ದರೆ ನಿಮ್ಮ ಮೇಲೆ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಬಾರಿಯ ಲೋಕಾಯುಕ್ತರ ಭೇಟಿ ಸಂದರ್ಭದಲ್ಲಿ ಪುರಸಭೆಗೆ ನೀಡಿದ್ದ 3 ಅರ್ಜಿಗಳ ಬಗ್ಗೆ ನಿಮಗೆ ವಿವರ ಕೇಳಿದ್ದೆವು. ನೀವು ಹಾರಿಕೆಯ ಉತ್ತರ ನೀಡಿದ್ದೀರಿ. ಇಂತಹ ಹಾರಿಕೆ ಉತ್ತರಗಳನ್ನು ನೀಡಿ ಸುಮ್ಮನಾಗಲು ನಾವು ಬಿಡುವುದಿಲ್ಲ. ಸರಿಯಾದ ಉತ್ತರ ಕೊಡಲೇಬೇಕು. ಸರಿಯಾದ ಉತ್ತರ ನೀಡದಿದ್ದರೆ ನಿಮ್ಮ ವಿರುದ್ಧ ಕ್ರಮ ಎದುರಿಸಬೇಕಾಗುತ್ತದೆ ಎಂದರು.
ನಮ್ಮ ಜಮೀನಿಗೆ ಖಾತೆ ಮಾಡಿಕೊಡಿ ಎಂದು 2 ವರ್ಷದಿಂದ ಅರ್ಜಿ ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ನಾಗಲಾಪುರದ ರೈತರು ದೂರು ನೀಡಿದಾಗ ಅವರ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಎಲ್ಲ ಸರಿಯಾಗಿದೆ ಎಂದು ಗುರುತಿಸಿದ ಲೋಕಾಯುಕ್ತರು ಇನ್ನು ಹದಿನೈದು ದಿನದಲ್ಲಿ ಖಾತೆ ಮಾಡಿಕೊಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ಯಾವುದೇ ಕಾನೂನು ಜಾರಿಗೆ ತಂದರೂ ಕೆಲಸಗಳು ಆಗುತ್ತಿಲ್ಲ ಎಂದು ವ್ಯಾಪಕ ದೂರುಗಳಿವೆ. ವಿವಿಧ ಇಲಾಖೆಗಳಿಗೆ ಬರುವ ಅರ್ಜಿಗಳನ್ನು ತ್ವರಿತವಾಗಿ ವಿಲೇ ಮಾಡುವ ಅವಕಾಶ ಇದ್ದರೂ ಇಲ್ಲಸಲ್ಲದ ಕಾರಣ ಹೇಳಿ ರೈತರನ್ನು ವಿನಾಕಾರಣ ಸುಮ್ಮನೆ ಅಲೆದಾಡಿಸುತ್ತಿದ್ದೀರಿ. ಅರ್ಜಿ ನೀಡಿದ ಕೂಡಲೇ ಹಿಂಬರಹ ನೀಡಬೇಕಾದದ್ದು ನಿಮ್ಮ ಕರ್ತವ್ಯ. ಹಿಂಬರಹ ನೀಡದಿದ್ದರೆ ಅದೂ ಕೂಡ ಕರ್ತವ್ಯ ಲೋಪ ಆಗುತ್ತದೆ. ಸಾರ್ವಜನಿಕರಿಗೆ ತಕ್ಷಣ ಕೆಲಸಗಳನ್ನು ಮಾಡಿಕೊಡಬೇಕು. ಮಾಡಿಕೊಡದೆ ಲಂಚಕ್ಕಾಗಿ ಬೇಡಿಕೆ ಇಟ್ಟರೆ, ವಿನಾ ಕಾರಣ ವಿಳಂಬ ಮಾಡಿದರೆ ಕಟ್ಟು ನಟ್ಟಿನ ಕ್ರಮ ಜರುಗಿಸಬಹುದು ಎಂದು ಎಚ್ಚರಿಸಿದರು.
ಲೋಕಾಯುಕ್ತ ಇನ್ಸ್‌ಸ್ಪೆಕ್ಟರ್ ಎಚ್.ಎನ್. ಬಾಲು, ತಹಸೀಲ್ದಾರ್ ಎಸ್. ವಿಶ್ವನಾಥ್, ಇಒ ಗೋಪಾಲ್, ಡಾ.ಲಕ್ಷ್ಮೀಕಾಂತ್, ಡಾ.ರಾಜೇಶ್, ಎಸ್.ಐ.ಅರುಣ್, ಮೀನುಗಾರಿಕೆ ಇಲಾಖೆಯ ಸುಮಾ, ತೋಟಗಾರಿಕೆ ಇಲಾಖೆಯ ಭವ್ಯಾ, ಸಿಡಿಪಿಒ ಭಾಗ್ಯಮ್ಮ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಇತರರಿದ್ದರು.