

ಹಾಸನ: ಜಿಲ್ಲೆಯ ಜೀವನದಿ ಗೊರೂರಿನ ಹೇಮಾವತಿ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸೋಮವಾರ ಬಾಗಿನ ಅರ್ಪಿಸಿದರು. ಇವರೊಂದಿಗೆ ಸಂಸದ ಶ್ರೇಯಸ್ ಪಟೇಲ್, ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಶಾಸಕ ಸಿಮೆಂಟ್ ಮಂಜು ಸಾಥ್ ನೀಡಿದರು.
ಬಾಗಿನ ಅರ್ಪಣೆಗೂ ಮುನ್ನ ಬಾಗಿನ ಪೂಜಾ ಕಾರ್ಯ ನೆರವೇರಿಸಿದ ಸಚಿವರು ನಂತರ ಹೇಮಾವತಿ ನದಿಗೆ ಬಾಗಿನ ಅರ್ಪಿಸಿದರು. ಬಳಿಕ ಜಲಾಶಯದ ಬಟನ್ ಒತ್ತುವ ಮೂಲಕ ಆರು ಕ್ರಸ್ಟ್ ಗೇಟ್‌ಗಳ ಮೂಲಕ ಸಾಂಕೇತಿಕವಾಗಿ ನೀರು ಬಿಡುಗಡೆ ಮಾಡಿದರು. ೀ ವೇಳೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಹಾಗೂ ಜಲಾಶಯದ ಇಂಜಿನೀಯರ್‌ಗಳು, ಅಧಿಕಾರಿಗಳು ಹಾಜರಿದ್ದರು.
ಬಾಗಿನ ಅರ್ಪಣೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಚಿವ ಕೆ.ಎನ್.ರಾಜಣ್ಣ ಅವರು ಮಾತನಾಡಿ, ಹೇಮಾವತಿ ಜಲಾಶಯದ ಆವರಣವನ್ನು ಕೆಆರ್‌ಎಸ್‌ನ ಬೃಂದಾವನ ಮಾದರಿಯಲ್ಲೇ ಪ್ರವಾಸಿ ತಾಣವಾಗಿ ರೂಪಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಡಿಪಿಆರ್ ಸಿದ್ಧಪಡಿಸಿ ಸಲ್ಲಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ಒತ್ತಾಯಿಸಲಾಗುವುದು. ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಮಾದರಿಯಲ್ಲೇ ಹೇಮಾವತಿ ಜಲಾಶಯವನ್ನು ಪ್ರವಾಸಿತಾಣವಾಗಿ ಅವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಬಾಗಿನ ಅರ್ಪಣೆ ಕಾರ್ಯಕ್ರಮ ಈ ಮೊದಲೇ ಆಗಬೇಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಂದಲೇ ಬಾಗಿನ ಅರ್ಪಣೆ ಮಾಡಿಸಬೇಕೆಂಬ ಯೋಜನೆ ಹಾಕಿಕೊಂಡಿದ್ದರಿಂದ ತಡವಾಗಿದೆ. ಸದ್ಯದ ರಾಜಕೀಯ ಕಾರಣಗಳಿಂದ ಮುಖ್ಯಮಂತ್ರಿ ಅವರು ಬರಲು ಸಾಧ್ಯವಾಗದೆ ಕಾರಣ ನಾವೇ ಕಾರ್ಯಕ್ರಮ ನೆರವೇರಿಸಿದ್ದೇವೆ. ಹೇಮಾವತಿ ಜಲಾಶಯ ಹಾಸನ, ತುಮಕೂರು, ಮಂಡ್ಯ ಜಿಲ್ಲೆಯ ಜೀವನಾಡಿಯಾಗಿದೆ. ನೀರು ಪ್ರಕೃತಿಯಲ್ಲಿ ಸಿಗುವಂತಹ ಅತ್ಯಮೂಲ್ಯವಾದ ವಸ್ತು. ಪೋಲಾಗದಂತೆ ನೋಡಿಕೊಂಡು ಸದ್ಬಳಕೆ ಮಾಡಿಕೊಳ್ಳಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.
ಸಂಸದ ಶ್ರೇಯಸ ಪಟೇಲ್ ಮಾತನಾಡಿ, ನಮ್ಮದು ಜನಪರ, ಬಡವರ ಪರ ಇರುವ ಸರ್ಕಾರ. ಈ ಸರ್ಕಾರಕ್ಕೆ ಯಾವುದೇ ಸಮಸ್ಯೆ ಎದುರಾಗದೆ ನಿರಾತಂಕವಾಗಿ ಅವಧಿ ಪೂರೈಸಲಿದೆ. ಜಿಲ್ಲೆಯ ಹಾಗೂ ನಾಡಿನ ಸಮಸ್ತ ಜನರ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಹೀಗೆಯೇ ಇರಲಿ ಎಂದು ಹೇಳಿದರು.
ರಾಜಣ್ಣ ಅವರು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕೆಲಸ ಆಗುತ್ತಿವೆ. ಹಾಸನ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಜಿಲ್ಲೆಯ ಎಲ್ಲ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ, ಹಾಸನ ಉಪ ವಿಭಾಗಾಧಿಕಾರಿ ಹಾಗೂ ನಾಲ್ವರು ತಹಸೀಲ್ದಾರರು, ಈ ವರ್ಷದ ಉತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಗೆ ಭಾಜರಾಗಿರುವುದೇ ಕಣ್ಣ ಮುಂದಿನ ಉದಾಹರಣೆ ಎಂದರು.
ಋಣಾನುಬಂಧವೋ ಏನೋ ಹೇಮಾವತಿ ಜಲಾಶಯಕ್ಕೆ ರಾಜಣ್ಣ ಅವರೇ ಬಾಗಿನ ಸಲ್ಲಿಸಬೇಕು ಎಂದು ಇತ್ತು. ಅದು ಇಂದು ನೆರವೇರಿದೆ. ಈ ಕಾರ್ಯ ತಡ ಆಗಿರಬಹುದು. ಅದೇನೇ ಇದ್ದರೂ, ಮಂಗಳ ಕಾರ್ಯ ಇಂದು ಹೇಮಾವತಿ ತಾಯಿಗೆ ನೆರವೇರಿದೆ. ಪ್ರತಿ ವರ್ಷವೂ ಹೇಮಾವತಿ ಜಲಾಶಯ ಹೀಗೆಯೇ ಭರ್ತಿ ಆಗಬೇಕು. ಇದರಿಂದ ಹಾಸನ ಜಿಲ್ಲೆ ಸೇರಿದಂತೆ ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳ ಜನ-ಜಾನುವಾರುಗಳಿಗೂ ಅನುಕೂಲ ಆಗಲಿದೆ ಎಂದರು.