ಹೇಮಾ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ಸವಿತಾ ಆಯ್ಕೆ

BHYRAPURA
Published on

ಆಲೂರು: ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಹೇಮಾ ಮಂಜೇಗೌಡ ಹಾಗೂ ಉಪಾಧ್ಯಕ್ಷರಾಗಿ ಸವಿತಾ ರಂಗಸ್ವಾಮಿ ಆಯ್ಕೆಯಾದರು.


ಬೈರಾಪುರ ಗ್ರಾಮ ಪಂಚಾಯಿತಿ 15 ಸದಸ್ಯ ಬಲ ಹೊಂದಿದ್ದು, ಗುರುವಾರ ಗ್ರಾಪಂ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡಯಿತು. ಅಧ್ಯಕ್ಷ ಸ್ಥಾನಕ್ಕೆ ಹೇಮಾ ಮಂಜೇಗೌಡ ಮತ್ತು ವನಜಾಕ್ಷಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸವಿತಾ ರಂಗಸ್ವಾಮಿ ಮತ್ತು ಜಯಕುಮಾರ ನಾಮಪತ್ರ ಸಲ್ಲಿಸಿದ್ದರು. ಯಾರೂ ನಾಮಪತ್ರ ಹಿಂಪಡೆಯದ ಕಾರಣ ಚುನಾವಣಾ ಪ್ರಕ್ರಿಯೆ ಜರುಗಿತು.

ಚುನಾವಣಾ ಅಧಿಕಾರಿ ತಾಪಂ ಇಒ ಡಾ.ನಾರಾಯಣಸ್ವಾಮಿ, ಸದಸ್ಯರಿಗೆ ಗುಪ್ತ ಮತದಾನಕ್ಕೆ ಅವಕಾಶ ನೀಡಿದರು. ಹೇಮಾ ಮಂಜೇಗೌಡ ಮತ್ತು ಸವಿತಾ ರಂಗಸ್ವಾಮಿ ತಲಾ 8 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಗ್ರಾಪಂ ಸದಸ್ಯರು ಅಭಿನಂದಿಸಿದರು. ಬಿಜೆಪಿ ಮುಖಂಡ ಲೋಕೇಶ್ ಕಣಗಾಲ್, ಮುಖಂಡರಾದ ಅಜಿತ್ ಚಿಕ್ಕಕಣಗಾಲು, ಹನುಮಂತೇಗೌಡ, ರವಿಕುಮಾರ್, ಜೆಡಿಎಸ್ ಮುಖಂಡ ಕೆ.ಎನ್.ಕಾಂತರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್, ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

ಪಿಡಿಒ ಅಮಾನತಿಗೆ ಗ್ರಾಪಂ ಸದಸ್ಯ ಆಗ್ರಹ: ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಪಿಡಿಒ ಮಂಜುನಾಥ್ ವಿರುದ್ಧ ಕ್ರಮಕ್ಕೆ ಬೈರಾಪುರ ಗ್ರಾಪಂ ಸದಸ್ಯರು ಪಟ್ಟುಹಿಡಿದ ಪರಿಣಾಮ ಮಧ್ಯಾಹ್ನ 12ಗಂಟೆಗೆ ಮುಗಿಯಬೇಕಿದ್ದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ 3 ಗಂಟೆಗೆ ಮುಗಿಯುವಂತಾಯಿತು.


ಬೆಳಗ್ಗೆ 9ಕ್ಕೆ ನಾಮಪತ್ರ ಸ್ವೀಕರಿಸುವುದು ಹಾಗೂ 12 ಗಂಟೆಗೆ ಚುನಾವಣೆ ಪ್ರಕ್ರಿಯೆ ಮುಗಿಸಿ ಅಧ್ಯಕ್ಷ ಉಪಾಧ್ಯಕ್ಷರ ಹೆಸರು ಘೋಷಣೆ ಮಾಡಲು ಸಮಯ ನಿಗದಿಯಾಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರಾದ ಹೇಮಾ ಮಂಜೇಗೌಡ ಮತ್ತು ಸವಿತಾ ರಂಗಸ್ವಾಮಿ 8.45ಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ ಮುಖಂಡ ಗ್ರಾಪಂ ಸದಸ್ಯ ರುದ್ರೇಗೌಡ ಬಣದ ಬಿಜೆಪಿ ಬೆಂಬಲಿತರಾದ ವನಜಾಕ್ಷಿ ಮತ್ತು ಜಯಕುಮಾರ್ 7 ನಿಮಿಷ ತಡವಾಗಿ (9.07ಕ್ಕೆ) ನಾಮಪತ್ರ ಸಲ್ಲಿಸಿದರು. 9 ಗಂಟೆ ಮೀರಿದ್ದರಿಂದ ನಾಮಪತ್ರ ಸ್ವೀಕಾರ ಮಾಡಬಾರದು ಎಂದು ಕೆಲವು ಸದಸ್ಯರು ಪಿಡಿಒ ಮಂಜುನಾಥ್‌ಗೆ ಒತ್ತಾಯಿಸಿದರು. ಅದರೂ ಪಿಡಿಒ ನಾಮಪತ್ರ ಸ್ವೀಕರಿಸಿದರು. ಇದರಿಂದ ಕೆಲ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ, ನಾಮಪತ್ರ ತಿರಸ್ಕರಿಸಬೇಕು. ಇಲ್ಲದಿದ್ದರೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪಟ್ಟುಹಿಡಿದರು.


ನಂತರ ಚುನಾವಣಾಧಿಕಾರಿ ನಾರಾಯಣಸ್ವಾಮಿ ಮಧ್ಯಪ್ರವೇಶಿಸಿ ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಸದಸ್ಯರು ಪಟ್ಟು ಸಡಿಲಿಸದೆ ಅಮಾನತಿಗೆ ಆಗ್ರಹಿಸಿದರು. ಕೊನೆಗೆ ಪಿಡಿಒ ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಚುನಾವಣಾ ಪ್ರಕ್ರಿಯೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net