

ಚಿತ್ರದುರ್ಗ: ಅಕ್ಕಮಹಾದೇವಿ, ರಾಣಿಚೆನ್ನಮ್ಮನ ವಿಶ್ವವಿದ್ಯಾಲಯವಿದೆ. ಅದೇ ರೀತಿ ಹೇಮರೆಡ್ಡಿ ಮಲ್ಲಮ್ಮ ಹೆಸರಿನಲ್ಲಿ ವಿವಿ ತೆರೆದು ಹೆಚ್ಚಿನ ಸಂಶೋಧನೆ ನಡೆಸಲು ಸರ್ಕಾರ ಮುಂದಾಗಬೇಕು ಎಂದು ಬೆಂಗಳೂರಿನ ರಾಮಯ್ಯ ವಿವಿಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟಿ.ಎನ್.ನಿರಂಜನಪ್ರಭು ಒತ್ತಾಯಿಸಿದರು.
ತರಾಸು ರಂಗಮಂದಿರದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದಿಂದ ಸೋಮವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ, ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು.
15ನೇ ಶತಮಾನದಲ್ಲಿ ಆಂಧ್ರದ ರಾಮಾಪುರದಲ್ಲಿ ಜನಿಸಿದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಪತಿ ಮನೆಯಲ್ಲಿ ಅನೇಕ ಕಷ್ಟ ಎದುರಿಸಿ ವಿಶೇಷ ಗುಣದ ಮೂಲಕ ಗಮನ ಸೆಳೆಯುವ ಮಹಾಶರಣೆ. ಆದ್ದರಿಂದ ಆಕೆಯ ಚರಿತ್ರೆ ಎಲ್ಲರಿಗೂ ಮಾದರಿಯಾಗಬೇಕು. ಅದಕ್ಕಾಗಿ ವಿಶ್ವವಿದ್ಯಾಲಯ ಸ್ಥಾಪಿಸಿ ಸಂಶೋಧನೆ ನಡೆಸಬೇಕಿದೆ. ಈ ಕುರಿತು ಸಮಾಜ ಸರ್ಕಾರದ ಮೇಲೆ ಒತ್ತಡ ಏರಬೇಕು ಎಂದು ಸಲಹೆ ನೀಡಿದರು.
ಸ್ತ್ರೀ ಸಮಾನತೆಗಾಗಿ 600 ವರ್ಷಗಳ ಹಿಂದೆಯೇ ಹೋರಾಡಿದ ದಿಟ್ಟ ಮಹಿಳೆ ಮಲ್ಲಮ್ಮ. ಎಲ್ಲರ ಬದುಕಲ್ಲೂ ಒಂದೊಂದು ರೀತಿಯ ಸಮಸ್ಯೆ, ಸವಾಲು ಎದುರಾಗುತ್ತವೆ. ಹಾಗಂತ ಕುಗ್ಗದೆ, ಗುರಿ ತಲುಪುವತ್ತ ದಾಪುಗಾಲಿಡಲು ಇಂತಹ ಆದರ್ಶ ಶರಣೆಯರು ಮನುಕುಲಕ್ಕೆ ದಾರಿದೀಪವಾಗಿದ್ದಾರೆ ಎಂದು ಬಣ್ಣಿಸಿದರು.
ಜಿಪಂ ಮಾಜಿ ಸದಸ್ಯ ಎಚ್.ಟಿ.ನಾಗಿರೆಡ್ಡಿ ಮಾತನಾಡಿ, ಮೊದಲು ಮುಂಚೂಣಿಯಲ್ಲಿ ಇರದ ಈ ಸಮುದಾಯ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸುವ ಮೂಲಕ ಸಂಘಟಿತವಾಗುತ್ತಿರುವುದು ಉತ್ತಮ ಬೆಳವಣಿಗೆ. ಸಮಾಜ ಸದೃಢವಾಗಿ ಕಟ್ಟಿ ಪೀಳಿಗೆಯನ್ನು ಮುಂದೆ ತರುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಆರ್.ಚಂದ್ರಮೌಳಿ, ಸಮಾಜದ ಅಧ್ಯಕ್ಷ ಜಿ.ಚಿದಾನಂದಪ್ಪ, ಕಾರ್ಯದರ್ಶಿ ಡಿ.ಟಿ.ಶಿವಾನಂದಪ್ಪ, ಮಹೇಶ್, ಶುಭಂ, ಪಿ.ಆರ್.ಸತೀಶ್, ನಾಗರಾಜ್ ಸಂಗಂ ಇತರರಿದ್ದರು.
ಕೋಟ್
ಮಲ್ಲಮ್ಮ ಕಾಯಕದಲ್ಲಿ ದೇವರನ್ನು ಕಂಡ ಶಿವಭಕ್ತೆ. ಹೀಗಾಗಿ ಆಕೆಯ ಆದರ್ಶಗಳಂತೆ ಎಲ್ಲರೂ ನಡೆದಾಗ ನಿಜವಾಗಿಯೂ ಜಯಂತಿ ಅರ್ಥಪೂರ್ಣವಾಗಲಿದೆ.
ಕೆ.ರವಿಶಂಕರ್‌ರೆಡ್ಡಿ, ಡಿಡಿಪಿಐ