

ಹುಬ್ಬಳ್ಳಿ: ವಿದ್ಯುತ್ ಸರಬರಾಜು ಕಂಪನಿ ವತಿಯಿಂದ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 4ರ ವ್ಯಾಪ್ತಿಯಲ್ಲಿ ಗುರುವಾರ ಹೆಸ್ಕಾಂ ಗ್ರಾಹಕರ ಜಾಗೃತಿ ಸಭೆ ಜರುಗಿತು.
ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ವಿಶ್ವನಾಥ ಶಿರಹಟ್ಟಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯುತ್ ಅಪಘಾತ ತಡೆಯುವ ನಿಟ್ಟಿನಲ್ಲಿ ಶಿಥಿಲಗೊಂಡ, ಮುರಿದ ಕಂಬಗಳನ್ನು ಬದಲಾಯಿಸುವುದು, ಮಧ್ಯಂತರ ಕಂಬಗಳನ್ನು ಅಳವಡಿಸುವುದು ಮತ್ತು ಜೋತು ಬಿದ್ದ ತಂತಿಗಳನ್ನು ಸರಿಪಡಿಸುವ ಕ್ರಮಗಳನ್ನು ಹೆಸ್ಕಾಂ ಕೈಗೊಳ್ಳಲಿದೆ.
ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಹಾಗೂ ಅಪಾಯಕಾರಿ ಪರಿವರ್ತಕ ಕೇಂದ್ರಗಳು ಹಾಗೂ ಸ್ಥಳಗಳನ್ನು ಗ್ರಾಹಕರು ಗಮನಿಸಿದಲ್ಲಿ ತಕ್ಷಣವೇ ಹೆಸ್ಕಾಂ ಸಹಾಯವಾಣಿ 1912ಗೆ ಕರೆ ಮಾಡಿ ತಿಳಿಸಿ, ಅಪಘಾತ ತಡೆಯಲು ಕೈಜೋಡಿಸಲು ಮನವಿ ಮಾಡಿದರು.
ಐಎಸ್ಐ, 5 ಸ್ಟಾರ್ ವಿದ್ಯುತ್ ಉಪಕರಣಗಳನ್ನು ಉಪಯೋಗಿಸಬೇಕು. ವಿದ್ಯುತ್ ಶಾಕ್ಗೆ ಒಳಪಟ್ಟ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ಮತ್ತು ಇತರೆ ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸೌರಶಕ್ತಿ ಬಳಸುವುದು, ಸ್ವಂತ ಬಳಕೆಗೂ ಮೀರಿ ಉತ್ಪಾದಿಸಿದಲ್ಲಿ ಹೆಸ್ಕಾಂ ಗ್ರಿಡ್ಗೆ ಸೌರವಿದ್ಯುತ್ ರವಾನಿಸಿ ಗ್ರಾಹಕರು ಹಣ ಗಳಿಸಬಹುದು ಎಂದು ಸಲಹೆಗಳನ್ನು ನೀಡಿದರು.
ಹೆಸ್ಕಾಂ ನವನಗರ ಶಾಖಾಧಿಕಾರಿ ಆರ್.ಟಿ. ವಿಶ್ವಮೂರ್ತಿ, ಅತಿಥಿಗಳಾಗಿ ಬಸನಗೌಡ ಪಾಟೀಲ, ನೇಮಚಂದ್ರ ದೇವಕ್ಕಿ, ನಿಂಗಪ್ಪ ಇದ್ಲಿ, ಅಮರಗೋಳ ವ್ಯಾಪ್ತಿಯ ಗ್ರಾಹಕರು ಉಪಸ್ಥಿತರಿದ್ದರು.