

ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ಗ್ರಾಮದ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಆಗ್ರಹಿಸಿ ಗ್ರಾಮದ 110 ಕೆವಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಬುಧವಾರ ರೈತರು ಪ್ರತಿಭಟನೆ ನಡೆಸಿದರು.
ರೈತರಾದ ಬಾಳು ಮಸಳಿ, ಅಶೋಕ ಇಂಡಿ ಮಾತನಾಡಿ, ಹಗಲು ಹೊತ್ತಿನಲ್ಲಿ ರೈತರ ಪಂಪ್ ಸೆಟ್‌ಗಳಿಗೆ ನಿರಂತರವಾಗಿ 7 ತಾಸು ಥ್ರೀ ಪೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಆದರೆ ಹೆಸ್ಕಾಂನವರು ಹಗಲು ಹೊತ್ತಿನಲ್ಲಿ 4 ತಾಸು ರಾತ್ರಿ ವೇಳೆ 3 ತಾಸು ವಿದ್ಯುತ್ ಪೂರೈಸುತ್ತಿದ್ದಾರೆ. ಅದರಲ್ಲಿ ಪದೇಪದೇ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಬಸವನಬಾಗೇವಾಡಿ ಹೆಸ್ಕಾಂ ಎಇಇ ಗುರುರಾಜ ಸಂಪನ್ನವರ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ, ಸಮಸ್ಯೆಯನ್ನು ಒಂದು ವಾರದಲ್ಲಿ ಪರಿಹರಿಸುವ ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು.
ರೈತರಾದ ವಿಶ್ವನಾಥ ತಡಗಲಿ, ಶೆಟ್ಟೆಪ್ಪ ಅನ್ನಪ್ಪಗೊಳ, ಅಶೋಕ ಹಾವಿನಾಳ, ಅಪ್ಪುಗೌಡ ಬಿರಾದಾರ, ತಿಮ್ಮಣ್ಣ ಬ್ಯಾಕೋಡ, ಅಂಬಾಜಿ ಶಿಂಧೆ, ಹುಸೇನಸಾಬ ಮಕಾನದಾರ, ಸುರೇಶ ಇಟ್ಟಗಿಹಾಳ, ಕಾಳಪ್ಪ ಸಿಂದಗಿ, ಬಿಲಾಲ್ ಬಾಗವಾನ ಇತರರಿದ್ದರು.