ಹೆಸರು ಕಾಳು ಖರೀದಿ ಕೇಂದ್ರಕ್ಕೆ ಚಾಲನೆ

4 NRD-1.
ನರಗುಂದ ಎಪಿಎಂಸಿ ಕಚೇರಿಯಲ್ಲಿ ಬೆಂಬಲಬೆಲೆ ಹೆಸರು ಖರೀದಿ ಕೇಂದ್ರಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಭಾನುವಾರ ಚಾಲನೆ ನೀಡಿದರು. ಅಜ್ಜಪ್ಪ ಹುಡೇದ, ಉಮೇಶಗೌಡ ಪಾಟೀಲ, ಎ.ಡಿ. ಅಮರಾವದಗಿ, ಬಸಪ್ಪ ಮಳಗಿ, ಎಂ.ಎಸ್. ಕರಿಗೌಡ್ರ, ಮಲ್ಲಪ್ಪ ಭೋವಿ ಇತರರಿದ್ದರು.
Published on

ನರಗುಂದ: ಕೇಂದ್ರ ಸರ್ಕಾರವು 36,390 ಮೆಟ್ರಿಕ್ ಟನ್ ಎಫ್​ಎಕ್ಯೂ ಗುಣಮಟ್ಟದ ಹೆಸರು ಕಾಳು ಖರೀದಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ. ರೈತರು ಯೋಜನೆ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢತೆ ಹೊಂದಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣಲ್ಲಿ ಭಾನುವಾರ ಬೆಂಬಲ ಬೆಲೆ ಹೆಸರು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಫೆಡ್ ಸಂಸ್ಥೆಯಿಂದ ಕಳೆದ ವರ್ಷ ಪ್ರತಿ ಕ್ವಿಂಟಾಲ್ ಹೆಸರನ್ನು 7275 ರೂ.ಗೆ ಗರಿಷ್ಠ 6 ಕ್ವಿಂಟಾಲ್ ಮಾತ್ರ ಖರೀದಿಸಲಾಗುತ್ತಿತ್ತು. ಆದರೀಗ ರಾಜ್ಯ ಸರ್ಕಾರದ ವಿಶೇಷ ಪ್ರಸ್ತಾವನೆ ಮೇರೆಗೆ ಪ್ರತಿಯೊಬ್ಬ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಹೆಸರು ಖರೀಸಲು ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದೆ. ಅಲ್ಲದೆ, ಕಳೆದ ಬಾರಿಗಿಂತ ಪ್ರತಿ ಕ್ವಿಂಟಾಲ್ ಹೆಸರಿಗೆ 480 ರೂಪಾಯಿ ಬೆಲೆ ಹೆಚ್ಚಿಸಿ, 7755 ರೂ.ದರದಲ್ಲಿ ಖರೀದಿಸಲಾಗುತ್ತಿದೆ. ಅರ್ಹ ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಎಪಿಎಂಸಿ, ಸಹಕಾರಿ ಮಾರಾಟ ಮಹಾಮಂಡಳಿ ಅಧಿಕಾರಿಗಳು ಮತ್ತು ಹಮಾಲರು ರೈತರನ್ನು ಯಾವುದೇ ಕಾರಣಕ್ಕೂ ಕಾಯಿಸಬಾರದು. 45 ದಿನಗಳ ನೋಂದಣಿ ಜತೆಗೆ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ನಿಗಧಿಪಡಿಸಿದೆ ಎಂದರು.
ನರಗುಂದದ ಟಿಎಪಿಸಿಎಂಎಸ್ ಹಾಗೂ ತಾಲೂಕಿನ ಚಿಕ್ಕನರಗುಂದ, ಸುರಕೋಡ, ಸಂಕಧಾಳ, ಶಿರೋಳ, ಕೊಣ್ಣೂರ, ಹಿರೇಕೊಪ್ಪ, ಜಗಾಪೂರ, ಖಾನಾಪೂರ-ಗಂಗಾಪೂರ ಗ್ರಾಮದ ಪಿಎಸಿಎಸ್ ಕೇಂದ್ರಗಳು ಸೇರಿದಂತೆ ಗದಗ ಜಿಲ್ಲೆಯಲ್ಲಿ ಒಟ್ಟು 54 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಎ.ಡಿ. ಅಮರಾವದಗಿ, ಟಿಎಪಿಸಿಎಂಎಸ್ ಅಧ್ಯಕ್ಷ ಅಜ್ಜಪ್ಪ ಹುಡೇದ, ಸದಸ್ಯ ಉಮೇಶಗೌಡ ಪಾಟೀಲ, ಎಂ.ಎಸ್. ಕರಿಗೌಡ್ರ, ಎಸ್.ಬಿ. ಕರಿಗೌಡ್ರ, ಶಂಕರಗೌಡ ಯಲ್ಲಪ್ಪಗೌಡ್ರ, ಮಲ್ಲಪ್ಪ ಭೋವಿ, ಬಸಪ್ಪ ಮಳಗಿ, ಹನಮಂತ ಹದಗಲ್ಲ, ರಾಚನಗೌಡ ಪಾಟೀಲ, ಬಿ.ಬಿ. ಐನಾಪೂರ, ಅಶೋಕ ಸಾಲೂಟಗಿ, ಎನ್.ವಿ. ಮೇಟಿ, ಸಣ್ಣಗದಿಗೆಪ್ಪ ತಳವಾರ, ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ, ವೈ.ಎಚ್. ಪಾಟೀಲ, ಸಚಿನ ಪಾಟೀಲ, ವಿ.ಜಿ. ಹನ್ನಿಕೇರಿ, ಸುಧಾ ಬಂಡಿ, ಪುಂಡಲೀಕ ಚಿಂತಾಲ, ಮಹಾಂತೇಶ ಗುಂಡಳ್ಳಿ, ಶರಣು ಘಾಟಗೆ, ಇಬ್ರಾಹಿಂ ಎಸ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net