

ಬಸವರಾಜ ಇದ್ಲಿ ಹುಬ್ಬಳ್ಳಿ
ಒಂದೆಡೆ ಡಿಜಿಟಲ್ ಇಂಡಿಯಾ ಹೆಸರಲ್ಲಿ ಅತ್ಯಂತ ವೇಗವಾಗಿ ನಗರದ ಜನರು ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಗ್ರಾಮೀಣ ಭಾರತದ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ.
ನಗರ ಪ್ರದೇಶದಲ್ಲಿ ಆಸ್ತಿ ಉತಾರ, ಜಮೀನಿನ ಇತರೆ ದಾಖಲೆಗಳು ಬೆರಳ ತುದಿಯಲ್ಲಿ ಲಭ್ಯವಾಗುತ್ತಿವೆ. ಅದೇ ಗ್ರಾಮೀಣ ಪ್ರದೇಶದಲ್ಲಿ ಒಂದು ಉತಾರ ಪಡೆದುಕೊಳ್ಳಬೇಕಿದ್ದರೆ ದಿನಗಟ್ಟಲೇ ಕಾಯ್ದರೂ ಸಿಗುವ ಭರವಸೆ ಇಲ್ಲವಾಗಿದೆ. ಗ್ರಾಮೀಣರಿಗೂ ತ್ವರಿತವಾಗಿ ಅವರ ಆಸ್ತಿಗಳ ದಾಖಲೆ ಸೇರಿ ಕೆಲವು ಸೌಲಭ್ಯಗಳನ್ನು ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಇ- ಸ್ವತ್ತು ಎಂಬ ಡಿಜಿಟಲ್ ವ್ಯವಸ್ಥೆ ಮಾಡಿಕೊಟ್ಟಿದೆ. ಆದರೆ, ಅದಕ್ಕೆ ವೇಗವಾದ ನೆಟ್ವರ್ಕ್ ಹಾಗೂ ಅಗತ್ಯ ಪರಿಣಿತ ಸಿಬ್ಬಂದಿ ಕೊಡದೇ ಗ್ರಾಮೀಣರು ಪರದಾಡುವಂತೆ ಮಾಡಿದೆ.
ಯಾವುದಾದರೂ ಸೇವೆಗಾಗಿ ಗ್ರಾಮ ಪಂಚಾಯಿತಿಗೆ ಹೋದರೆ ದಿನಗಟ್ಟಲೇ ಕಾಯಬೇಕು. ಕೆಲವೊಮ್ಮೆ ಎರಡು- ಮೂರು ದಿನ ಸೇವೆ ಸಿಗದೇ ‘ಸಾಕಪ್ಪ ಇದರ ಸಹವಾಸ’ ಎಂದು ನಗರ ಇಲ್ಲವೇ ಸಮೀಪದ ನಾಡಕಚೇರಿಗಳಿಗೆ ಹೋಗಿ ಉತಾರ ಪಡೆಯುವ ಪರಿಸ್ಥಿತಿ ಬರುತ್ತಿದೆ. ಇದರಿಂದ ಗ್ರಾಮೀಣರ ಹಣ, ಸಮಯ ಎರಡೂ ವ್ಯರ್ಥವಾಗುತ್ತಿದೆ.
ಇನ್ನೂ ಕೆಲವೆಡೆ ಸರ್ವರ್ ಇಲ್ಲ ಎನ್ನುವ ನೆಪ ಹೇಳಿಕೊಂಡು ಗ್ರಾಮೀಣ ಜನರಿಗೆ ಕೊಡಬೇಕಾದ ಸೌಲಭ್ಯಗಳನ್ನೇ ಕೆಲ ಪಂಚಾಯಿತಿ ಸಿಬ್ಬಂದಿ ದೂರ ಮಾಡುತ್ತಿದ್ದಾರೆ. ಹಾಗಾಗಿ ಪಂಚಾಯಿತಿಗಳಲ್ಲಿ ಇ- ಸ್ವತ್ತು ಇದ್ದೂ ಇಲ್ಲದಂತಾಗಿದೆ. ಸಮೀಪದ ಖಾಸಗಿಯವರು ನಡೆಸುವ ಡಿಜಿಟಲ್ ಸೇವಾ ಕೇಂದ್ರಗಳೇ ಗ್ರಾಮೀಣರಿಗೆ ನೆರವಾಗುತ್ತಿವೆ. ಕೃಷಿಯೇತರ ಆಸ್ತಿಗಳ ದಾಖಲೆ ಪಡೆಯಲು (ಫಾಮ್ರ್ 9 ಹಾಗೂ ಫಾಮ್ರ್ 11ಬಿ) ನಿತ್ಯ ಸಾವಿರಾರು ಅರ್ಜಿಗಳು ರಾಜ್ಯದ ವಿವಿಧೆಡೆಯಿಂದ ಇ-ಸ್ವತ್ತು ಪೋರ್ಟಲ್ಗೆ ದಾಖಲಾಗುತ್ತವೆ. ಅ. 15ರಂದು ಒಟ್ಟು 24.42 ಲಕ್ಷ ಅರ್ಜಿಗಳು ಸೃಷ್ಟಿಯಾಗಿದ್ದವು.
ರೈತರಿಗೆ ಜಮೀನಿನ ಉತಾರ ತನ್ನ ಊರಲ್ಲೇ ಸಿಗಲಿ ಎನ್ನುವ ಕಾರಣಕ್ಕೆ ಈ ವ್ಯವಸ್ಥೆ ಜಾರಿ ಮಾಡಲಾಗಿದೆ. ಆದರೆ, ಅದರ ಮುಖ್ಯ ಉದ್ದೇಶವೇ ಈಡೇರುತ್ತಿಲ್ಲ ಎಂಬುದು ರೈತರ ದೂರು.
ಜನನ ಮರಣ ಪ್ರಮಾಣ ಪತ್ರ, ಸಬ್ಸಿಡಿ ಸೌಲಭ್ಯ, ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಸೇರಿ 110 ಸೇವೆಗಳಿಗೆ ಇ- ಸ್ವತ್ತಿನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಹೇಳಿತ್ತು. ಆದರೆ, ಯಾವುದೇ ಸೌಲಭ್ಯಗಳು ಸರ್ವರ್ ಹಾಗೂ ಸಿಬ್ಬಂದಿ ಸಮಸ್ಯೆಯಿಂದ ಸಿಗುತ್ತಿಲ್ಲ. ಜಮೀನಿನ ಮೋಜಣಿ ಮಾಡಿಸಲು ನಿತ್ಯ ನೂರಾರು ಅರ್ಜಿಗಳು ಬರುತ್ತಿವೆ. ಆದರೆ, ಬಹುತೇಕ ಬಾಕಿ ಉಳಿದುಕೊಳ್ಳುತ್ತಿವೆ. ಧಾರವಾಡ ಜಿಲ್ಲೆಯೊಂದರಲ್ಲೇ 11708 ಅರ್ಜಿಗಳು ದಾಖಲಾಗಿದ್ದರೆ, ಅದರಲ್ಲಿ 9800 ಅರ್ಜಿಗಳಿಗೆ ಸ್ಪಂದನೆ ಸಿಕ್ಕಿದೆ. ಇನ್ನೂ 1800 ಅರ್ಜಿಗಳು ಬಾಕಿ ಉಳಿದುಕೊಂಡಿವೆ. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳು ಸೇರಿ ಒಂದು ಲಕ್ಷ ಅರ್ಜಿಗಳು ಬಾಕಿ ಇವೆ ಎಂಬುದನ್ನು ಇ-ಸ್ವತ್ತು ಮೋಜಣಿ ವಿಭಾಗವೇ ಹೇಳುತ್ತದೆ.
ಸರ್ವರ್ ಸಮಸ್ಯೆಯಿಂದಲೇ ಬಹುತೇಕ ಗ್ರಾಮಗಳಲ್ಲಿ ಇ- ಸ್ವತ್ತು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸಮೀಪದ ಸೇವಾ ಕೇಂದ್ರ ಇಲ್ಲವೇ ನಗರಕ್ಕೆ ಹೋಗಿಯೇ ದಾಖಲೆ ಪಡೆದುಕೊಳ್ಳಬೇಕು. ನೆಟ್ವರ್ಕ್ ಬಲಪಡಿಸಿ ಅಗತ್ಯ ಸಿಬ್ಬಂದಿ ನೇಮಿಸಿದರೆ ಎಲ್ಲ ಸೌಲಭ್ಯಗಳು ಹಳ್ಳಿಯಲ್ಲೇ ಸಿಗುತ್ತವೆ ಎಂದು ಹುಬ್ಬಳ್ಳಿ ಎಪಿಎಂಸಿ ಸದಸ್ಯರಾದ ನೂಲ್ವಿ ಗ್ರಾಮದ ಜಗನ್ನಾಥಗೌಡ ಸಿದ್ದನಗೌಡ್ರ, ಹಳ್ಯಾಳ ಗ್ರಾಮದ ರಘುನಾಥಗೌಡ ಕೆಂಪಲಿಂಗನಗೌಡ್ರ ಅಭಿಪ್ರಾಯಪಡುತ್ತಾರೆ.
ಸರ್ವರ್ ಸಮಸ್ಯೆ ನಿರಂತರ ಎನ್ನುವಂತಾಗಿದೆ. ಕೆಲ ಖಾಸಗಿ ಸೇವಾ ಕೇಂದ್ರಗಳಲ್ಲೇ ಅಗತ್ಯ ದಾಖಲೆ ಪಡೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇಲ್ಲವೇ ತಾಲೂಕು ಕಚೇರಿಗೆ ಹೋಗಬೇಕು. 110 ಸೇವೆ ಕೊಡುವ ಇ-ಸ್ವತ್ತು ಈಗ ಇದ್ದೂ ಇಲ್ಲದಂತಾಗಿದೆ.| ಬಸವರಾಜ ಬಿಡ್ನಾಳ , ಮಾಜಿ ಅಧ್ಯಕ್ಷ ಅಂಚಟಗೇರಿ ಗ್ರಾಪಂ
ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಇದೀಗ ಇ-ಸ್ವತ್ತು ಬದಲಾಗಿ ಸ್ವಾಮಿತ್ವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಹುಬ್ಬಳ್ಳಿ ತಾಲೂಕಿನ ಹಲವು ಹಳ್ಳಿಗಳು ಸ್ವಾಮಿತ್ವ ಯೋಜನೆಯಡಿ ಸೇರ್ಪಡೆಗೊಂಡಿವೆ. ಅದರ ಮೂಲಕ ಹಳ್ಳಿಗಳಲ್ಲಿ ಜಮೀನಿನ ಸರ್ವೆ ಮಾಡಿ ಅಗತ್ಯ ದಾಖಲೆ ಪೂರೈಸಬಹುದಾಗಿದೆ.| ಎಂ.ಎಂ. ಸವದತ್ತಿ, ತಾಪಂ ಇಒ ಹುಬ್ಬಳ್ಳಿ