ಹೆಲ್ಮೆಟ್ ಸಹಿತ ಸಿಕ್ಕ ತಲೆ ಬುರುಡೆ ಮತ್ತೆ ನಾಪತ್ತೆ, ಪೊಲೀಸರಿಂದ ಶೋಧ

20
Published on

ಮೈಸೂರು: ಮಳೆ ನೀರು ಚರಂಡಿ ಹೂಳೆತ್ತುವ ವೇಳೆ ಹೆಲ್ಮೆಟ್ ಧರಿಸಿದ ಸ್ಥಿತಿಯಲ್ಲಿ ಮನುಷ್ಯನ ತಲೆ ಬುರುಡೆ ಸಿಕ್ಕಿದ್ದು, ಜನರಲ್ಲಿ ಆತಂಕ, ಕುತೂಹಲ ಮೂಡಿಸಿದೆ. ನಗರದ ಅಗ್ರಹಾರ-ಖಿಲ್ಲೆ ಮೊಹಲ್ಲಾದ ಶ್ರೀಕಾಂತ ಶಾಲೆಯ ಬಳಿ ಪತ್ತೆ ಅಗಿರುವ ಬುರುಡೆ ಈಗ ಯಾರು ಎನ್ನುವ ಪ್ರಶ್ನೆ ಮೂಡಿಸಿದೆ. ಆದರೆ ಸಿಕ್ಕ ಸ್ವಲ್ಪ ಸಮಯದಲ್ಲಿಯೇ ಬುರುಡೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೆ.ಆರ್. ಠಾಣೆ ಪೊಲೀಸರು, ನಗರಪಾಲಿಕೆ ಸಿಬ್ಬಂದಿ ಸಹಕಾರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಮಳೆಗಾಲ ಆರಂಭವಾಗುತ್ತಿರುವುದರಿಂದ ಚರಂಡಿಗಳಲ್ಲಿ ಹೂಳೆತ್ತಿ ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಲಾಗಿದೆ. ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಅವರ ವಾರ್ಡ್ ವ್ಯಾಪ್ತಿಯಲ್ಲಿಯೂ ಚರಂಡಿಯಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿತ್ತು. ಶ್ರೀಕಾಂತ ಶಾಲೆಯ ಬಳಿ ಶನಿವಾರ ಚರಂಡಿಯ ಹೂಳು ತೆಗೆಯುವಾಗ ಪೌರ ಕಾರ್ಮಿಕ ಪಳನಿ ಸ್ವಾಮಿ ಅವರಿಗೆ ಕೆಸರು ತುಂಬಿದ್ದ ಹೆಲ್ಮೆಟ್ ಸಿಕ್ಕಿದೆ.
ಸಿಕ್ಕಿದ ಹೆಲ್ಮಟ್ಅನ್ನು ತೆಗೆದು ಪರಿಶೀಲನೆ ಮಾಡುವಾಗ ಅದರೊಳಗೆ ತಲೆ ಬರುಡೆ ಇರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಅಲ್ಲದೇ ಕೊಳೆತು ಹೋಗಿದ್ದ ಬುರುಡೆಯಿಂದ ಬರುತ್ತಿದ್ದ ದುರ್ವಾಸನೆಯಿಂದ ಪಳನಿಸ್ವಾಮಿ ಬುರುಡೆಯನ್ನು ಚರಂಡಿಯಲ್ಲಿಯೇ ಬಿಸಾಡಿ ಮೇಲೆ ಬಂದು ಅಸ್ವಸ್ಥಗೊಂಡು ಬಿದ್ದಿದ್ದಾರೆ.
ಸಿಕ್ಕ ಬುರುಡೆ ನಾಪತ್ತೆ:
ಗುತ್ತಿಗೆದಾರ ದಯಾನಂದ ಇತರರು ಪಳನಿಸ್ವಾಮಿ ಅವರನ್ನು ಸಮಾಧಾನ ಪಡಿಸಿ, ನಗರಪಾಲಿಕೆ ಸದಸ್ಯ ಮಂಜುನಾಥ್ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆಗೆ ಒಳಚರಂಡಿ ನೀರು ಹರಿಯುತ್ತಿದ್ದರಿಂದ ಬುರುಡೆ ಆ ನೀರಿನಲ್ಲಿ ಕೊಚ್ಚಿ ಹೋಗಿದೆ ಎನ್ನಲಾಗಿದೆ.
ಕೆ.ಆರ್. ಠಾಣೆ ಪೊಲೀಸರು ಆಗಮಿಸಿ ನಗರಪಾಲಿಕೆ ಸಿಬ್ಬಂದಿಯೊಂದಿಗೆ ಮಳೆ ನೀರು ಚರಂಡಿಯಲ್ಲಿ ಜೆಸಿಬಿ ಸಹಾಯದಿಂದ ಶೋಧ ಕಾರ್ಯ ನಡೆಸಿದರು. ಸುಮಾರು 500 ಮೀಟರ್‌ಗೂ ಹೆಚ್ಚು ದೂರ ಒಂದರಂಡಿಯಲ್ಲಿ ಶೋಧ ನಡೆಸಿದರೂ ಯಾವುದೇ ತಲೆ ಬರುಡೆ ಪತ್ತೆಯಾಗಿಲ್ಲ.
ನಾಳೆಯು ಸಹ ಶೋಧ ಕಾರ್ಯ ಮುಂದುವರೆಯಲಿದ್ದು, ಹೂಳೆತ್ತುವ ಕಾರ್ಯದೊಂದಿಗೆ ತಲೆ ಬರುಡೆ ಏನಾದರೂ ಸಿಗಬಹುದೇ ಎಂದು ಪರಿಶೀಲಿಸಲಾಗುವುದು ಎಂದು ಪಾಲಿಕೆ ಸದಸ್ಯ ಮಂಜುನಾಥ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net