

ಶಿಕಾರಿಪುರ: ಹೆಲ್ಮೆಟ್ ಧರಿಸುವುದು ನಮ್ಮ ಸುರಕ್ಷೆಗಾಗಿ. ರಸ್ತೆ ಸುರಕ್ಷತಾ ನಿಯಮಗಳು ಇರುವುದು ಜನರ ಜೀವ ಸಂರಕ್ಷಣೆಗಾಗಿ. ಅಪಘಾತಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಪುರಸಭೆ ಮುಖ್ಯಾಕಾರಿ ಭರತ್ ಹೇಳಿದರು.
ಗ್ರಾಮಾಂತರ ಪೊಲೀಸ್ ಠಾಣೆ ಬಳಿ ರಸ್ತೆ ಸುರಕ್ಷಾ ಆಂದೋಲನದ ಅಂಗವಾಗಿ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಾಹನ ದಟ್ಟಣೆಯಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಪ್ರತಿಯೊಬ್ಬರ ಜೀವ ಅಮೂಲ್ಯ. ಜೀವ ರಕ್ಷಣೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದರು.
ಶಿರಾಳಕೊಪ್ಪ ಸಿಪಿಐ ಆರ್.ಆರ್.ಪಾಟೀಲ್ ಮಾತನಾಡಿ, ಹೆಲ್ಮೆಟ್ ಧರಿಸದಿರುವ ಕಾರಣ ಎಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬೈಕ್ ಸವಾರರರಿಗೆ ತಲೆಗೆ ಪೆಟ್ಟು ಬಿದ್ದು ಅತಿ ಹೆಚ್ಚು ಸಾವು ಉಂಟಾಗುತ್ತಿರುವುದಾಗಿ ಅನೇಕ ಆಸ್ಪತ್ರೆಗಳ ಮೂಲಗಳು ಹೇಳುತ್ತವೆ. ನಾವು ಆಸ್ಪತ್ರೆಗೆ ಸೇರದೆ ಮನೆ ಸೇರುವಂತಾಗಬೇಕು. ಕಾನೂನು ಪಾಲನೆ ಮಾಡಿ ಎಂದು ಸಲಹೆ ನೀಡಿದರು.
ಸರ್ಕಾರ ವಾಹನ ಸವಾರರ ತಲೆಗೆ ರಕ್ಷಣೆಗಾಗಿ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ದಯಮಾಡಿ ಮನೆಯಿಂದ ಹೊರ ಬರುವವರು ನಿಮ್ಮ ಕುಟುಂಬದವರು ನಿಮಗಾಗಿ ಕಾಯುತ್ತಿರುತ್ತಾರೆ. ನಿಮ್ಮಗಳ ರಕ್ಷಣೆಗಾಗಿಯೇ ಸರ್ಕಾರ ಕಾಯ್ದೆ ರಚಿಸಿದ್ದು ಇದನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ತಿಳಿಸಿದರು.
ಗ್ರಾಮಾಂತರ ಸಿಪಿಐ ಸಂತೋಷ್ ಪಾಟೀಲ್ ಮಾತನಾಡಿ, ತಾವು ದುಡಿದ ದುಡ್ಡನ್ನು ಅನಾವಶ್ಯಕವಾಗಿ ದಂಡದ ರೂಪದಲ್ಲಿ ಖರ್ಚು ಮಾಡದೆ ಅದೇ ಹಣದಲ್ಲಿ ಗುಣಮಟ್ಟದ ಹೆಲ್ಮೆಟ್ ಖರೀದಿಸಬೇಕು. ಇದರಿಂದ ಪ್ರಾಣ ರಕ್ಷಿಸಿಕೊಳ್ಳುವ ಜತೆಗೆ ಕಾನೂನು ಪರಿಪಾಲನೆ ಆಗುತ್ತದೆ ಎಂದರು.
ಪಿಎಸ್‌ಐ ಎಚ್.ಶರತ್ ಇತರರಿದ್ದರು.