ಹೆಲಿಕಾಪ್ಟರ್‌ನಲ್ಲಿ ಹೆದ್ದಾರಿ ಪರಿಶೀಲನೆ ಸರಿಯಲ್ಲ

Venkatesh H.A
Published on

ಮೈಸೂರು: ಮೈಸೂರು-ಬೆಂಗಳೂರು ದಶಪಥ ಕಾಮಗಾರಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೆಲಿಕಾಫ್ಟರ್ ಮೂಲಕ ಆಕಾಶದಲ್ಲಿ ಪರಿಶೀಲನೆ ಮಾಡುವುದಲ್ಲ. ರಸ್ತೆ ಮಾರ್ಗ ಸಾಗುವ ಮೂಲಕ ಪರಿಶೀಲನೆ ಮಾಡಬೇಕಿತ್ತು ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಟೀಕಿಸಿದರು.

ಆಕಾಶದ ಮೂಲಕ ಹೆದ್ದಾರಿ ಸಮೀಕ್ಷೆ ಮಾಡುತ್ತಿದ್ದು, ಅಲ್ಲಿಂದ ಗುಣಮಟ್ಟ ಪರಿಶೀಲನೆ ಮಾಡಿದ್ದಾರೆ. ಹೊಸ ಆಯಾಮ ಸೃಷ್ಟಿಸಿದ್ದು, ಇದು ಸರಿಯಾದ ಕ್ರಮವಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಹೆದ್ದಾರಿ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಮಳೆ ನೀರು ತುಂಬಿಕೊಂಡು ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸಚಿವರು ರಸ್ತೆ ಮಾರ್ಗವಾಗಿ ಸಾಗುವ ಮೂಲಕ ಜನರ ಅಹವಾಲು ಆಲಿಸಿ, ಎಲ್ಲಿ ಲೋಪದೋಷವಾಗಿದೆ ಎಂಬುದನ್ನು ವೀಕ್ಷಣೆ ಮಾಡಬೇಕಿತ್ತು. ಆದರೆ, ಇವರಿಗೆ ಇದು ಬೇಕಿಲ್ಲ. ಮೂಲ ಸಮಸ್ಯೆಗಳನ್ನು ಅರಿತುಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿಲ್ಲ ಎಂದು ಕುಟುಕಿದರು.

ಮೈಸೂರು-ಬೆಂಗಳೂರು ಹೆದ್ದಾರಿಯ ಮಾಲೀಕರೆಂದು ಸಂಸದ ಪ್ರತಾಪ್ ಸಿಂಹ ತಿಳಿದುಕೊಂಡಿದ್ದಾರೆ. ಆದರೆ, ಅವರ ಕ್ಷೇತ್ರ ವ್ಯಾಪ್ತಿಗೆ ಬರೀ 8 ಕಿಮೀ ಬರುತ್ತದೆ. ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಕ್ಷೇತ್ರ ವ್ಯಾಪ್ತಿಗೆ 57 ಕಿ.ಮೀ. ಮತ್ತು ಡಿ.ಕೆ.ಸುರೇಶ್ ಕ್ಷೇತ್ರ ವ್ಯಾಪ್ತಿಗೆ 57 ಕಿ.ಮೀ. ಬರುತ್ತದೆ. ಆದರೆ, ಅವರ‌್ಯಾರೂ ಎಲ್ಲವನ್ನೂ ನಾನೇ ಮಾಡಿಸಿದ್ದು ಎಂದೂ ಹೇಳಿಲ್ಲ ಎಂದರು.

ಈ ಹೆದ್ದಾರಿ ನಾಮಕರಣ ವಿಷಯದಲ್ಲಿ ಸ್ವಂತ ಕಂಪನಿಗೆ ಹೆಸರು ಇಡುವಂತೆ ಸಂಸದ ಪ್ರತಾಪ್ ಸಿಂಹ ವರ್ತಿಸಿದ್ದಾರೆ. ಇಲ್ಲಿ ಯಾವುದೇ ಪ್ರಕ್ರಿಯೆ ಪಾಲನೆ ಮಾಡಿಲ್ಲ. ಎಂಎಲ್‌ಸಿ ದಿನೇಶ್‌ಗೂಳಿಗೌಡ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.


ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಗೆಜ್ಜಲಗೆರೆಯಿಂದ ಮಂಡ್ಯಕ್ಕೆ ಹೆಲಿಕ್ಯಾಪ್ಟರ್‌ನಲ್ಲಿ ಹೋಗಿದ್ದಾರೆ. ಅವರೂ ರಸ್ತೆ ಮಾರ್ಗದಲ್ಲಿ ಹೋಗುವ ಧೈರ್ಯ ಮಾಡಲಿಲ್ಲ. 2018ರಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ‘ರೈತರ ಕಲ್ಯಾಣ, ರಾಜ್ಯ ಕಲ್ಯಾಣ’ ಭರವಸೆ ಈಡೇರಿಲ್ಲ. ಇದರಿಂದ ರೈತರು ಮುತ್ತಿಗೆ ಹಾಕುತ್ತಾರೆಂಬ ಭಯದಿಂದ ಅವರನ್ನು ಭೇಟಿ ಮಾಡಿಲ್ಲ ಎಂದು ಟೀಕಿಸಿದರು.

ಕೇಂದ್ರ ಸಚಿವರು ನೆಲದ ಮೇಲೆ ಓಡಾಡದಂಥ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹೆದರಿ ನೆಲದ ಮೇಲೆ ಓಡಾಡುತ್ತಿಲ್ಲ ಎಂದು ಟೀಕಿಸಿದರು.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಜಯ ಗಳಿಸಲ್ಲ. ಅಮಿತಾ ಷಾ ಎಷ್ಟು ಬಾರಿ ಬಂದರೂ ಹೋದರೂ ಏನೂ ಪ್ರಯೋಜನವಾಗಲ್ಲ ಎಂದರು.

ಪುರಭವನದಲ್ಲಿ ಸಭೆ
ರಂಗಾಯಣದಲ್ಲಿ ಪ್ರದರ್ಶನಗೊಂಡ ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಅವಹೇಳನ ಮಾಡಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ಜ.7ರಂದು ಬೆಳಗ್ಗೆ 10.30ಕ್ಕೆ ಪಕ್ಷಾತೀತವಾಗಿ ವಿವಿಧ ಸಂಘಟನೆಗಳ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚೆ ಮಾಡಿ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಿಳಿಸಿದರು.

ಅಡ್ಡಂಡ ಸಿ.ಕಾರ್ಯಪ್ಪ ರಂಗಾಯಣವನ್ನು ಬಿಜೆಪಿ ಕಾರ್ಯಾಲಯ ಮಾಡಿಕೊಂಡಿದ್ದು, ತಮ್ಮ ಪ್ರಚಾರಕ್ಕಾಗಿ ಈ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net