ಹೆರಿಗೆಗೆ ಬಂದರೆ ಅಸಮರ್ಪಕ ಚಿಕಿತ್ಸೆ

oplus_1048576
oplus_1048576
Published on

ಸಿಂಧನೂರು: ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಸಮಗ್ರವಾಗಿ ಸುಧಾರಿಸಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅಸ್ವಸ್ಥಗೊಂಡು ರಿಮ್ಸ್‌ನಲ್ಲಿ ಮೃತರಾದ ಮೂವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎನ್ನುವುದು ಸೇರಿದಂತೆ ಇತರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ಗೆ ನಗರಾಭಿವೃದ್ಧಿ ಹೋರಾಟ ಸಮಿತಿಯಿಂದ ಭಾನುವಾರ ಮನವಿ ಸಲ್ಲಿಸಲಾಯಿತು.

ಸಾರ್ವಜನಿಕ ಆಸ್ಪತ್ರೆ ಕಳೆದ ಎರಡು ತಿಂಗಳಿನಿಂದ ವಿವಾದದ ಕೇಂದ್ರ ಬಿಂದುವಾಗಿದೆ. ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಚಿಕಿತ್ಸೆ ಪಡೆಯಲು ರೋಗಿಗಳು ವೈದ್ಯರಿಗಾಗಿ ಗಂಟೆಗಟ್ಟಲೆ ಕಾಯಬೇಕಿದೆ. ಅದರಲ್ಲೂ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ಬರುವವರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ದೂರಿದರು.

ಔಷಧ ಕೊರತೆ, ಆಸ್ಪತ್ರೆಯಲ್ಲಿನ ಸಿಬ್ಬಂದಿ ನಡುವಿನ ಹೊಂದಾಣಿಕೆ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಕುರಿತು ಮೇಲಿಂದ ಮೇಲೆ ನಾಗರಿಕರಿಂದ ವ್ಯಾಪಕ ಆರೋಪಗಳು ಕೇಳಿ ಬಂದಿವೆ. ಕಳೆದ ಅಕ್ಟೋಬರ್‌ನಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಅಸ್ವಸ್ಥಗೊಂಡ ಮೂವರು ಬಾಣಂತಿಯರು ರಾಯಚೂರಿನ ರಿಮ್ಸ್‌ನಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಬರುವುದಕ್ಕೆ ಭಯಪಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಆಸ್ಪತ್ರೆಗೆ ಮೂಲ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.

ಸಂಘಟನೆಯ ಬಸವರಾಜ ಬಾದರ್ಲಿ, ಹುಸೇನ್‌ಸಾಬ್, ಮಂಜುನಾಥ ಗಾಂಧಿನಗರ, ಡಾ.ವಸೀಮ್ ಅಹ್ಮದ್, ಚಾಂದ ಕೆವಿಎಸ್, ಪರಶುರಾಮ, ಬಿ.ಎನ್.ಯರದಿಹಾಳ, ಕೃಷ್ಣಮೂರ್ತಿ, ಯಾಕೂಬ್ ಅಲಿ, ಬಸವರಾಜ ಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net