ಹೆರಿಗೆ ಆಸ್ಪತ್ರೆ ಸೀಲ್​ಡೌನ್

4 gdg 5a
Published on

ಗದಗ: ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಗುರುವಾರ ಹೆರಿಗೆ ಆಸ್ಪತ್ರೆಯನ್ನು ಸೀಲ್​ಡೌನ್ ಮಾಡಲಾಗಿದೆ. ಕರೊನಾ ಸೋಂಕಿತ ಗರ್ಭಿಣಿಯೊಬ್ಬರು ಗುರುವಾರ ಹೆರಿಗೆ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡಿದ್ದರಿಂದ ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತ ಆಸ್ಪತ್ರೆಯನ್ನು ಸೀಲ್​ಡೌನ್ ಮಾಡಿದೆ. ಅಲ್ಲದೆ, ಇಡೀ ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡಿಸಿದೆ.

ಲಕ್ಷೆ್ಮೕಶ್ವರ ತಾಲೂಕಿನ ಗೊಜನೂರ ಗ್ರಾಮದ 23 ವರ್ಷದ ಗರ್ಭಿಣಿ ಗುರುವಾರ ತಪಾಸಣೆಗಾಗಿ ಹೆರಿಗೆ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಅವರ ಗಂಟಲ ದ್ರವ ಮಾದರಿ ಪರೀಕ್ಷಿಸಿದ ಮೇಲೆ ಶುಕ್ರವಾರ ಅವರಿಗೆ ಕರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಈ ಮಹಿಳೆಯನ್ನು ತಪಾಸಣೆ ಮಾಡಿದ ವೈದ್ಯರು, ನರ್ಸ್ ಹಾಗೂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಇತರೆ ಸಿಬ್ಬಂದಿ ವರ್ಗಕ್ಕೆ ಆತಂಕ ಶುರುವಾಗಿದೆ.

ಗುರುವಾರ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿದ ಸಿಬ್ಬಂದಿ ಹಾಗೂ ಈ ದಿನ ಆಸ್ಪತ್ರೆಗೆ ಬಂದಿದ್ದ ಇತರ ಗರ್ಭಿಣಿಯರ ಮಾಹಿತಿಯನ್ನೂ ಆರೋಗ್ಯ ಇಲಾಖೆ ಕಲೆ ಹಾಕುತ್ತಿದೆ. ಈ ಮಹಿಳೆಗೆ ತಪಾಸಣೆ ಮಾಡಿದ ವೈದ್ಯರು, ನರ್ಸ್ ಮತ್ತು ಇತರೆ ಸಿಬ್ಬಂದಿ ಸೇರಿ 12 ಜನರನ್ನು ಗಂಟಲ ದ್ರವದ ಮಾದರಿ ಪರೀಕ್ಷಿಸಲಾಗಿದೆ.

ನವಜಾತ ಶಿಶುವಿಗೆ ಕರೊನಾ ಶಂಕೆ

ಗದಗ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಶನಿವಾರ ಲಕ್ಷೆ್ಮೕಶ್ವರ ತಾಲೂಕಿನ ಗೊಜನೂರಿನ ಮಹಿಳೆಗೆ ಜನಿಸಿದ ಶಿಶುವಿಗ ಕರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಮಗುವಿನ ತಾಯಿಗೆ ಸೋಂಕು ಇರುವುದರಿಂದ ಮಗುವಿಗೂ ತಗುಲಿರುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೆರಿಗೆ ನಂತರ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ, ಮಗುವಿನ ಗಂಟಲ ದ್ರವದ ಪರೀಕ್ಷೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಡಾ. ಶಿವನಗೌಡ, ಡಾ. ಶ್ರುತಿ ಹಾಗೂ ಡಾ. ಅಜಯ ನೇತೃತ್ವದಲ್ಲಿ ಸಿಜೇರಿಯನ್ ಮಾಡಲಾಯಿತು. 2.7 ಕೆಜಿ ತೂಕವಿರುವ ಹೆಣ್ಣುಮಗುವನ್ನು ಕೋವಿಡ್​-19 ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿರಿಸಿ (ಎನ್​ಐಸಿಯು) ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಜಿಮ್ಸ್ ನಿರ್ದೇಶಕ ಡಾ. ಪಿ.ಎಸ್. ಬೂಸರೆಡ್ಡಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ದ್ವಿಶತಕ ದಾಟಿದ ಕರೊನಾ

ಗದಗ: ಜಿಲ್ಲೆಯಲ್ಲಿ ಶನಿವಾರ ಮತ್ತೆ 4 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದಂತಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 203 ಜನರಿಗೆ ಸೋಂಕು ದೃಢಪಟ್ಟಿದ್ದು, 84 ಜನ ಗುಣಮುಖರಾಗಿದ್ದಾರೆ.

ನರಗುಂದ ಗಾಡಿ ಓಣಿ ನಿವಾಸಿ, 39 ವರ್ಷದ ಪುರುಷನ (ಪಿ-15320) ಸಂಪರ್ಕದಿಂದಾಗಿ ಅದೇ ಪ್ರದೇಶದ ಒಂದು ವರ್ಷದ ಬಾಲಕಿ ಹಾಗೂ 4 ವರ್ಷದ ಬಾಲಕಿಗೆ ಸೋಂಕು ತಗುಲಿದೆ. ಹಾವೇರಿ ಜಿಲ್ಲೆಯಿಂದ ಜೂನ್ 26ರಂದು ಜಿಲ್ಲೆಗೆ ಆಗಮಿಸಿದ ರೋಣ ತಾಲೂಕಿನ ಬೆಳವಣಕಿ ಗ್ರಾಮದ 38 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಗದಗ-ಬೆಟಗೇರಿಯ ನರಸಾಪುರದ ರಂಗಪ್ಪಜ್ಜ ಮಠದ ಹತ್ತಿರದ ನಿವಾಸಿ, 60 ವರ್ಷದ ಸೋಂಕಿತ ಮಹಿಳೆಯ (ಪಿ-18271) ಸಂಪರ್ಕದಿಂದ ಅದೇ ಪ್ರದೇಶದ 73 ವರ್ಷದ ಪುರುಷನಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ತಿಳಿಸಿದ್ದಾರೆ.

ಮತೊಬ್ಬ ಗರ್ಭಿಣಿಗೆ ವೈರಸ್

ಗದಗ: ತಾಲೂಕಿನ ಹರ್ತಿ ಗ್ರಾಮದ ಈರಣ್ಣ ದೇವಸ್ಥಾನ ಹತ್ತಿರದ ನಿವಾಸಿ, 22 ವರ್ಷದ ಗರ್ಭಿಣಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ. ಈ ಮಹಿಳೆಗೆ ಕೆಮ್ಮು ಬಂದಿದ್ದರಿಂದ ಗುರುವಾರ ಚಿಕಿತ್ಸೆಗಾಗಿ ನಗರದ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷಿಸಿದಾಗ ಮಹಿಳೆಗೆ ಕರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ಗರ್ಭಿಣಿಯನ್ನು ನಿಗದಿತ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಸೋಂಕಿತ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಜನರು ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 15 ಜನರನ್ನು ಪತ್ತೆ ಹಚ್ಚಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ

ಗಜೇಂದ್ರಗಡ: ಕರೊನಾ ಸೋಂಕು ತಡೆಗೆ ಸರ್ಕಾರ ಜಾರಿಗೊಳಿಸಿದ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಪಟ್ಟಣದ ಪ್ರಮುಖ ರಸ್ತೆ, ವಿವಿಧ ವೃತ್ತ ಹಾಗೂ ಕೆಲ ಬಡಾವಣೆಗಳಲ್ಲಿ ಶನಿವಾರ ಧ್ವನಿ ವರ್ಧಕ ಮೂಲಕ ಕರೊನಾ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ‘ಸಾರ್ವಜನಿಕರು ತುರ್ತು ಕಾರ್ಯ ಹೊರತುಪಡಿಸಿ ನಿತ್ಯ ರಾತ್ರಿ 8 ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ಹಾಗೂ ಭಾನುವಾರ ಸಂಪೂರ್ಣ ಲಾಕ್​ಡೌನ್​ಗೆ ಸಹಕರಿಸಬೇಕು. ಅಲ್ಲದೆ, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಜತೆಗೆ ಪರಸ್ಪರ ಅಂತರ ಕಾಪಾಡಿಕೊಂಡು ಸೋಂಕು ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಬೇಕು’ ಎಂದರು. ಲಾಕ್​ಡೌನ್ ಜಾರಿಯಾದ ದಿನದಿಂದಲೂ ಸ್ಥಳೀಯ ಸಾರ್ವಜನಿಕರ, ವ್ಯಾಪಾರಸ್ಥರ ಹಾಗೂ ಸಂಘ ಸಂಸ್ಥೆಗಳ ಸಹಕಾರ ಮತ್ತು ಮುಂಜಾಗ್ರತೆಯಿಂದಾಗಿ ಪಟ್ಟಣದಲ್ಲಿ ಯಾವುದೇ ಕರೊನಾ ಸೋಂಕಿನ ಪ್ರಕರಣಗಳಿಲ್ಲ. ಮುಂದಿನ ದಿನಗಳಲ್ಲಿಯೂ ಯಥಾಸ್ಥಿತಿ ಕಾಪಾಡಲು ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಸ್ಥಳೀಯ ಮೈಸೂರು ಮಠ, ಬಸವೇಶ್ವರ ವೃತ್ತ, ದುರ್ಗಾವೃತ್ತ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ, ಕುಷ್ಟಗಿ ರಸ್ತೆ, ರೋಣ ರಸ್ತೆ, ಬಸ್ ನಿಲ್ದಾಣ ಸೇರಿ ಕೆಲ ಬಡಾವಣೆಗಲ್ಲಿ ಪುರಸಭೆ ವಾಹನದೊಂದಿಗೆ ಲಾಕ್​ಡೌನ್ ನಿಯಮಗಳ ಜಾಗೃತಿ ಜೊತೆಗೆ ಕರೊನಾ ಹರಡದಂತೆ ಸಾರ್ವಜನಿಕರು ಕೈಗೊಳ್ಳ ಬೇಕಾದ ಕ್ರಮ ಕುರಿತು ಮಾಹಿತಿ ನೀಡಲಾಗಿದೆ ಎಂದು ಪುರಸಭೆ ಆರೋಗ್ಯ ಸಹಾಯಕ ರಾಘವೇಂದ್ರ ಮಂತಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net