

ಶೃಂಗೇರಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಹೆರವಳ್ಳಿ ಪ್ರಶಾಂತ್ ಹೆಗ್ಡೆ ಅವರ ಮನೆ ಸಮೀಪ ಶೃಂಗೇರಿ ಶಾರದಾ ಪೀಠಕ್ಕೆ ಸಂಬಂಧಿಸಿದ ಶಾಸನವನ್ನು ಅಧ್ಯಯನ ಮಾಡಲಾಗಿದೆ.
ಶೃಂಗೇರಿ ಶಾರದಾಪೀಠದ 13ನೇ ಜಗದ್ಗುರುಗಳಾದ ಹಾಲಾಡಿ ಒಡೆಯರೆಂದು ಖ್ಯಾತಿ ಪಡೆದ ಶ್ರೀ ನೃಸಿಂಹಭಾರತೀ ಸ್ವಾಮೀಜಿ ಅವರು ಕ್ರಿ.ಶ 1389-1418 ತೀರ್ಥಮುತ್ತೂರು ಮಠದ ಶ್ರೀ ಜ್ಞಾನೇಂದ್ರ ಭಾರತೀ ಸ್ವಾಮೀಜಿ ಅವರಿಗೆ ಭೂದಾನ ನೀಡಿರುವ ಸ್ಥಳದಲ್ಲಿ ಶಿಲಾಶಾಸನ ಪತ್ತೆಯಾಗಿದೆ.
ಕ್ರಿ.ಶ 1399 ಮೇ 1ರ ಬುಧವಾರದ ಕಾಲಘಟ್ಟದ ಐದು ಅಡಿ ಎತ್ತರದ ಶಾಸನವಿದು. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರರ ಕೆತ್ತನೆ, ಬಲಭಾಗದಲ್ಲಿ ಭಕ್ತನ ಚಿತ್ರ, ದೀಪದ ಕಂಬ, ಮಧ್ಯದಲ್ಲಿ ಶಿವಲಿಂಗ ಹಾಗೂ ಎಡಭಾಗದಲ್ಲಿ ಕರುವಿಗೆ ಹಾಲು ಉಣಿಸುವ ಗೋವಿನ ಚಿತ್ರದ ಕೆತ್ತನೆ ಇದೆ. ಕನ್ನಡ ಲಿಪಿಯಲ್ಲಿ ಶಾಸನವಿದೆ. ವಿಜಯನಗರದ ಅರಸ ಇಮ್ಮಡಿ ಹರಿಹರ ರಾಯನ ಕಾಲಘಟ್ಟದಲ್ಲಿ ಶಾಸನ ಕೆತ್ತಲಾಗಿದೆ. ಶಾಸನದಲ್ಲಿ ಹಾರದವಳ್ಳಿ ಎಂದು ಉಲ್ಲೇಖವಿದ್ದು, ಪ್ರಸ್ತುತ ಈ ಊರನ್ನು ಹೆರವಳ್ಳಿ ಎಂದು ಕರೆಯಲಾಗುತ್ತಿದೆ.
ಹಲವು ವರ್ಷಗಳ ಹಿಂದೆ ಶಾಸನವನ್ನು ನಿಧಿಗಳ್ಳರು ಅಗೆದಿದ್ದು ಶಾಸನದ ಅರ್ಧಭಾಗ ಕತ್ತರಿಸಲ್ಪಟ್ಟಿದೆ. ಅದನ್ನು ಜೋಡಿಸಿ ಪ್ರಶಾಂತ್ ಹೆಗ್ಡೆ ಕುಟುಂಬ ಜತನದಿಂದ ಕಾಪಾಡಿಕೊಂಡು ಬಂದು ವರ್ಷಕೊಮ್ಮೆ ಪೂಜೆ ಮಾಡುತ್ತಿದೆ.
ಶಾಸನದ ಕುರಿತು ಶ್ರೀ ಶಂಕನಾರಾಯಣ ದೇವಸ್ಥಾನದ ಅರ್ಚಕ ಶಿವಪ್ರಸಾದ್ ಅಡಿಗರಿಂದ ಮಾಹಿತಿ ತಿಳಿದು ಪಂಚಗ್ರಾಮ ಸಮುದಾಯದ ಕುರಿತು ಪಿಎಚ್.ಡಿ ಅಧ್ಯಯನ ಮಾಡುತ್ತಿರುವ ತುಮಕೂರು ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಜಿ.ಆರ್.ವೈಶಾಲಿ ಅವರು ಶಾಸನವನ್ನು ಸ್ವಚ್ಛಗೊಳಿಸಿದ್ದಾರೆ. ಮತ್ತೊಬ್ಬ ಸಂಶೋಧನಾರ್ಥಿ ಶಶಿಕುಮಾರ್ ನಾಯ್ಕ ಅದರ ಪ್ರತಿ ತೆಗೆದಿದ್ದಾರೆ. ಇವರಿಬ್ಬರ ಮಾರ್ಗದರ್ಶಕರಾದ ಪ್ರೊ. ಎಂ.ಕೊಟ್ರೇಶ್ ಕೂಡ ಅಧ್ಯಯನ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಇವರಿಗೆ ಸ್ಥಳೀಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ನಿಖಿತ್‌ಕುಮಾರ್, ಶಿವಾನಂದ ಐತಾಳ್, ಉದ್ಯಮಿ ಶ್ರೇಯಸ್ಸು ಕವಿಲುಕೊಡಿಗೆ ಸಹಕಾರ ನೀಡಿದ್ದಾರೆ.
ಶಾಸನದಲ್ಲಿ ಮೂವತ್ತೈದು ಸಾಲುಗಳು ಮೇಲ್ಭಾಗದಲ್ಲಿ ಕಂಡುಬಂದಿವೆ. ಶಾಸನದಲ್ಲಿ ಬೊಮ್ಮಣ್ಣ, ಸಿಂಗಸೆಟ್ಟಿ, ಗೋವಿಂದ ಭಟ್ಟ, ಕೃಷ್ಣಸೇನಾಭೊವ ಹಾಗೂ ಶಂಕರನಾರಾಯಣ ಸ್ಥಳದ ಉಲ್ಲೇಖವಿದೆ.