ಹೆಮ್ಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ಧಿ

ಮದ್ದೂರು ತಾಲೂಕಿನ ಹನುಮಂತಪುರ ಪ್ರಾಥಮಿಕ ಪಾಠ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿ ಡಾ.ಸಿ.ಪಿ.ಜಾಫರ್ ಪಾಠ ಮಾಡುತ್ತಿರುವುದು. ಡಾ.ಕುಮಾರ್, ಶೇಖ್‌ತನ್ವೀರ್‌ಆಸೀಫ್, ನಂದೀಶ್‌ಗೌಡ, ಲೀಲಾವತಿ, ನರಸಿಂಹಮೂರ್ತಿ, ಸಂದೀಪ್ ಇದ್ದರು.
11M.D.R.3
Published on

ಮದ್ದೂರು: ತಾಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳು ಆಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿ ಡಾ.ಸಿ.ಪಿ.ಜಾಫರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಹುಳಗನಹಳ್ಳಿ ಗ್ರಾಮದಲ್ಲಿ ಅಮೃತ ಸರೋವರ ಯೋಜನೆಯಡಿ ನಿರ್ಮಾಣವಾಗಿರುವ ರಾಮನಕಟ್ಟೆ (ಕಲ್ಯಾಣಿಯನ್ನು) ಸೋಮವಾರ ವೀಕ್ಷಣೆ ಮಾಡಿ, ಕಲ್ಯಾಣಿ ನಿರ್ಮಾಣ ಮತ್ತು ಸ್ವಚ್ಛತೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಕದಲಿಪುರ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಸರ್ಕಾರಿ ಶಾಲೆಯನ್ನು ಪಂಚಾಯಿತಿ ವತಿಯಿಂದ ಸುಂದರವಾಗಿ ಪುನರ್ ನಿರ್ಮಾಣ ಮಾಡಿ, ಮಕ್ಕಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಹನುಮಂತಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ತಾವೇ ಪಾಠ ಮಾಡಿ ಕೆಲಕಾಲ ಮಕ್ಕಳ ಜತೆ ಅತ್ಮೀಯವಾಗಿ ಬೆರೆತರು. ಕನ್ನಡ, ಇಂಗ್ಲಿಷ್ ಭಾಷೆಯ ಪಠ್ಯಗಳನ್ನು ವಿದ್ಯಾರ್ಥಿಗಳಿಂದ ಓದಿಸಿ, ತಪ್ಪುಗಳನ್ನು ತಿಳಿಸಿಕೊಟ್ಟು ಗಮನಸೆಳೆದರು.

ಕೆಲವು ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಓದಿದ ರೀತಿ ಕಂಡು ಆಶ್ವರ್ಯ ವ್ಯಕ್ತಪಡಿಸಿದರು. ಅಲ್ಲಿಂದ ಹೆಮ್ಮನಹಳ್ಳಿ ಗ್ರಾಪಂ ಆವರಣದಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಗ್ರಂಥಾಲಯ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಡಾ.ಸಿ.ಪಿ.ಜಾಫರ್, ಹೆಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ನಂದೀಶ್‌ಗೌಡ, ಪಿಡಿಒ ಲೀಲಾವತಿ ಅವರು ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮುಂದೆ ಇದೇ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದು ಆಶಿಸಿದರು.
ರಾಜ್ಯದ ಎಲ್ಲ ಗ್ರಾಪಂಗಳು ಇದೇ ಮಾದರಿಯಲ್ಲಿ ಕೆಲಸ ಮಾಡಿದರೆ ಗ್ರಾಮಾಂತರ ಪ್ರದೇಶಗಳು ಸಾಕಷ್ಟು ಅಭಿವೃದ್ಧಿಯಾಗುತ್ತವೆ. ಈ ನಿಟ್ಟಿನಲ್ಲಿ ತಾಪಂ ಇಒ, ಪಿಡಿಒ, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್, ತಹಸೀಲ್ದಾರ್ ನರಸಿಂಹಮೂರ್ತಿ, ತಾಪಂ ಇಒ ಸಂದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net