ಹೆಬ್ಬಾಳ್ಕರ್ ಅಬ್ಬರದ ಪ್ರಚಾರ

Hebbalkar Abbarada Prachara Belgaum
ಬೆಳಗಾವಿ ತಾಲೂಕಿನ ಬಾಳೆಕುಂದ್ರಿ ಬಿ.ಕೆ.ಯಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜನರಿಗೆ ನಮಸ್ಕರಿಸಿದರು.
Published on

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮುಂದುವರಿಸಿದ್ದಾರೆ. ಬಾಳೆಕುಂದ್ರಿಬಿ.ಕೆ. ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ರೋಡ್ ಶೋ ನಡೆಸಿದರು. ಲಕ್ಷ್ಮೀ ಹೆಬ್ಬಾಳ್ಕರ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅದ್ದೂರಿ ಸ್ವಾಗತ ಕೋರಿದರು. ಜೆಸಿಬಿಯಿಂದ ಬೃಹತ್ ಹಾರ ಹಾಕಲಾಯಿತು. ಡೊಳ್ಳು, ನಗಾರಿ ಮೂಲಕ ಮೆರವಣಿಗೆಯಲ್ಲಿ ಕರೆದೊಯ್ದರು. ಕಿಕ್ಕಿರಿದು ಸೇರಿದ್ದ ಜನರು ಜೈಕಾರ ಹಾಕಿದರು.

ಮಹಿಳೆಯರು, ವಯೋವೃದ್ಧರೆನ್ನದೆ ಎಲ್ಲರೂ ಹೆಬ್ಬಾಳ್ಕರ್ ಅವರಿಗೆ ಹೂವಿನ ಮಳೆಗೈದರು. ಹೆಬ್ಬಾಳ್ಕರ್ ಅವರು ವಾಹನದಿಂದ ಅಲ್ಲಲ್ಲಿ ಕೆಳಗಿಳಿದು ಹಿರಿಯರಿಗೆ ಗೌರವ ಸಲ್ಲಿಸಿದರು. ಕೆಲವರು ಆರತಿ ಬೆಳಗಿ ಶುಭ ಹಾರೈಸಿದರೆ, ಇನ್ನು ಕೆಲವರು ಶಾಲು, ಹಾರ ಹಾಕಿ ವಿಜಯೀ ಭವ ಎಂದು ಹರಸುತ್ತಿದ್ದರು. ಕೆಲವು ಯುವಕರು ಅಂಬೇಡ್ಕರ್ ಭಾವಚಿತ್ರ ಅರ್ಪಿಸಿ, ಗೌರವಿಸಿದರು.
ಬಾಳೇಕುಂದ್ರಿ ಬಿಕೆಯ ದತ್ತಮಂದಿರ ರಸ್ತೆ, ಪಾಟೀಲ ಗಲ್ಲಿ, ಮರಾಠ ಗಲ್ಲಿ, ಅಂಬೇಡ್ಕರ್ ಗಲ್ಲಿ, ನಾಯಕ ಗಲ್ಲಿ, ಬಾಗವಾನ ಗಲ್ಲಿ, ಪರಮಾನಂದ ಕಾಲನಿ, ಚಾವಡಿ ಗಲ್ಲಿ, ಜನತಾ ಪ್ಲಾಟ್ ಹಾಗೂ ಪಂತ ನಗರದ ಎಲ್ಲ ಪ್ರದೇಶಗಳಲ್ಲಿ ರೋಡ್ ಶೋ ನಡೆಸಿದರು.

ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಕಳೆದ 5 ವರ್ಷ ನಾನು ಯಾವ ರೀತಿಯಲ್ಲಿ ಕೆಲಸ ಮಾಡಿದ್ದೇನೆ ಎನ್ನುವುದನ್ನು ನೀವೇ ನೋಡಿದ್ದೀರಿ. ಕಷ್ಟವಿರಲಿ, ಸುಖವಿರಲಿ, ಪ್ರತಿಯೊಂದು ಸಂದರ್ಭದಲ್ಲಿ ನಿಮ್ಮೊಂದಿಗೆ ನಿಂತಿದ್ದೇನೆ. ನೀವೂ ನನಗೆ ನಿರೀಕ್ಷೆಗೂ ಮೀರಿ ಸಹಕಾರ ಕೊಟ್ಟಿದ್ದೀರಿ. ಈಗ ಚುನಾವಣೆ ಬಂದಿದೆ. ಮತ್ತೊಮ್ಮೆ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಕಾಲೇಜು, ಆಸ್ಪತ್ರೆ, ಬೃಹತ್ ಕೈಗಾರಿಕೆಗಳನ್ನು ತರುವ ಉದ್ದೇಶ ಇದೆ. ಕ್ಷೇತ್ರದಲ್ಲೇ ಉನ್ನತ ಶಿಕ್ಷಣ, ಆರೋಗ್ಯಸೇವೆ ಒದಗಿಸುವ ಜತೆಗೆ ನಿಮ್ಮ ಮನೆಯ ಮಕ್ಕಳಿಗೆ ಕೈಗೆ ಕೆಲಸ ಕೊಡುವಂತಹ ಯೋಜನೆಗಳನ್ನು ತರುತ್ತೇನೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸ್ಥಳೀಯ ಮುಖಂಡರಾದ ಮೈನುದ್ದೀನ್ ಅಗಸಿಮನಿ, ಗುಲಾಬಿ ಅಶೋಕ ಕೋಲ್ಕಾರ, ಅಪ್ಸರ್ಜ ಮಾದಾರ, ಮೊಹ್ಮದ ಜಮಾದಾರ, ಹೊನಗೌಡ ಪಾಟೀಲ, ಮಲಿಕ್ ಮನಿಯಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net