ಹೆನ್ನಾಗರ ಕೆರೆ ಉಳಿಸಿ, ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ

26ank nwss and photos 03.
Published on

ಆನೇಕಲ್: ಪಟ್ಟಣದಲ್ಲಿ ಹೆನ್ನಾಗರ ಕೆರೆ ಉಳಿಸಿ ಎನ್ನುವ ಘೋಷವಾಕ್ಯದಡಿ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಹಾಗೂ ರಾಜಾಪುರ ಸಂಸ್ಥಾನ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಹೋರಾಟ ಹಮ್ಮಿಕೊಳ್ಳಲಾಯಿತು.

ತಾಲೂಕಿನ ಹೆನ್ನಾಗರ ಕೆರೆ ಏರಿ ಮೇಲೆ ಶುಕ್ರವಾರ ಜಮಾಯಿಸಿದ ನೂರಾರು ಜನರು, ಕೆರೆ ಉಳಿಸುವಂತೆ ಒತ್ತಾಯಿಸಿ, ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು.

ವಾರದ ಹಿಂದೆ ಕೆರೆ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನೀರಿನಿಂದ ಹಲವು ಕಡೆ ಬೆಳೆಹಾನಿ ಉಂಟಾಗಿತ್ತು. ಇದಕ್ಕೆ ಪ್ರಮುಖ ಕಾರಣ ರಾಜಕಾಲುವೆ ಒತ್ತುವರಿ. ಆದ್ದರಿಂದ ಒತ್ತುವರಿ ತೆರವುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹೆನ್ನಾಗರ ಕೆರೆ ಒಂದು ಕಾಲದಲ್ಲಿ ಈ ಭಾಗದ ಜನರಿಗೆ ಕುಡಿಯುವ ನೀರು ಪೂರೈಸುತ್ತಿತ್ತು. ಆದರೆ ಜಿಗಣಿ ಹಾಗೂ ಸುತ್ತಮುತ್ತ ಕೈಗಾರಿಕೆಗಳು ಹೆಚ್ಚಾಗಿ, ಕೆರೆಗೆ ಕಲುಷಿತ ನೀರು ಹರಿದು ಬರುತ್ತಿದ್ದು, ಇದರಿಂದ ಕೆರೆ ಸಂಪೂರ್ಣವಾಗಿ ಮಲಿನವಾಗಿದೆ ಎಂದರು.

ವಾರದಿಂದ ಮಳೆಯಾಗಿರುವುದರಿಂದ ಹೆನ್ನಾಗರ ಕೆರೆಯಿಂದ ನೀರು ಕೋಡಿ ಹರಿದು ಅಕ್ಕಪಕ್ಕದ ರೈತರ ಜಮೀನುಗಳಿಗೆ ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಸರ್ಕಾರ ರೈತರ ಸಹಾಯಕ್ಕೆ ನಿಲ್ಲಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಆರ್.ಕೆ. ರಮೇಶ್ ಮಾತನಾಡಿ, ಹೆನ್ನಾಗರಕೆರೆ ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಈ ಭಾಗದ ರೈತರು ಹಾಗೂ ಸ್ಥಳೀಯರು ಸಾಕಷ್ಟು ಸಂಕಷ್ಟ ಎದುರಿಸಬೇಕು ಎಂದರು.

ಹಲವು ಬಾರಿ ಹೋರಾಟದ ಮೂಲಕ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಕೆರೆಯಲ್ಲಿ ಕಲುಷಿತ ನೀರು ತುಂಬಿ, ಅಕ್ಕಪಕ್ಕದ ರೈತರು ಫಸಲು ಪಡೆಯಲಾಗುತ್ತಿಲ್ಲ. ಇಷ್ಟಾದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದರು.

ಕೂಡಲೇ ಸಂಬಂಧಪಟ್ಟವರು ಕೊಳಚೆ ನೀರನ್ನು ನಿಲ್ಲಿಸಲು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಯೋಧ ಕ್ಯಾಪ್ಟನ್ ಸಂತೋಷ್ ಕುಮಾರ್ ಮಾತನಾಡಿ, ಹೆನ್ನಾಗರ ಕೆರೆ ಉಳಿಸುವ ಸಲುವಾಗಿ ತಡವಾಗಿಯಾದರೂ ಗ್ರಾಮಸ್ಥರೆಲ್ಲರೂ ಒಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೆರೆಯ ಉಳಿವಿಗಾಗಿ ಹಾಗೂ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವು ಮಾಡಿ ಸರಾಗವಾಗಿ ನೀರು ಹರಿಯುವಂತೆ ಮಾಡಲು ಅಧಿಕಾರಿಗಳು ಮುಂದಾಗಬೇಕು. ಈ ಕಾರ್ಯಕ್ಕೆ ನಾವು ಸಹಕಾರ ನೀಡುತ್ತೇವೆ ಎಂದರು.

ಹೆನ್ನಾಗರ ಗ್ರಾಪಂ ಅಧ್ಯಕ್ಷೆ ಮುನಿರತ್ನಮ್ಮ ಮುನಿರಾಜು , ಉಪಾಧ್ಯಕ್ಷ ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷ ಆರ್.ಕೆ. ಕೇಶವ ರೆಡ್ಡಿ, ಸದಸ್ಯರಾದ ಕಿರಣ್, ರಾಮಸ್ವಾಮಿ, ಮುರುಗೇಶ್, ಸತೀಶ್, ಶಿವರಾಜ್, ವಿನಯ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net