ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ

1
Published on

ಪಾಂಡವಪುರ : ಶಾಲಾ, ಕಾಲೇಜುಗಳಿಗೆ ತೆರಳಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಕೆ.ಹೊಸೂರು ಗೇಟ್ ಬಳಿ ಜಮಾವಣೆಗೊಂಡ ಟಿ.ಎಸ್.ಛತ್ರ, ಇಂಗಲಗುಪ್ಪೆ ಹಾಗೂ ಕೆ.ಹೊಸೂರು ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರತಿದಿನ ಬಸ್ ಸಮಸ್ಯೆ ಕಾರಣ ಶಾಲಾ ಕಾಲೇಜುಗಳಿಗೆ ತೆರಳಲು ತಡವಾಗುತ್ತಿದೆ. ಗಂಟೆಗಟ್ಟಲೇ ಕಾದರೂ ಸೂಕ್ತ ಸಮಯಕ್ಕೆ ಬಸ್ ಸಿಗುತ್ತಿಲ್ಲ. ಇದರಿಂದ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.
ಬೆಳಗಿನ ಸಮಯದಲ್ಲಿ ಈ ಮಾರ್ಗವಾಗಿ ಹೆಚ್ಚಿನ ಸಂಖ್ಯೆಯ ಬಸ್ ರೂಟ್ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆಯಾದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಕೆ.ಹೊಸೂರು ಗ್ರಾಮಕ್ಕೆ ಕಾಮನಾಯಕ ಹಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ಕೋವಿಡ್ ಬಳಿಕ ಸ್ಥಗಿತಗೊಂಡಿದೆ. ಗ್ರಾಮದಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಪಾಂಡವಪುರ, ಮೈಸೂರು ಸೇರಿದಂತೆ ಇತರೆಡೆಗೆ ತೆರಳಬೇಕಿದೆ. ಈ ನಿಟ್ಟಿನಲ್ಲಿ ಕ್ರಮ ಅಗತ್ಯ ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಪಾಂಡವಪುರ ಕೆಎಸ್‌ಆರ್‌ಟಿಸಿ ಡಿಪೋ ಮೇನೇಜರ್ ಅಪ್ಪೀರೆಡ್ಡಿ, ನಾಳೆಯಿಂದಲೇ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net