

ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆನೀರು ಬಿಡುವಂತೆ ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಮಿತಿಯ ನಡೆಯನ್ನು ವಿರೋಧಿಸಿ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ರಸ್ತೆ ಸಂಚಾರ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಕುವೆಂವು ವೃತ್ತದಲ್ಲಿ ಮಂಗಳವಾರ ಜಮಾವಣೆಗೊಂಡ ರಾಜ್ಯ ರೈತ ಸಂಘದ ಕಾರ್ಯಕರ್ತರು, ದಲಿತ ಸೇರಿದಂತೆ ಪ್ರಗತಿಪರ ಹಾಗೂ ಕನ್ನಡಪರ ಹೋರಾಟ ಸಂಘಟನೆಗಳ ಪದಾಧಿಕಾರಿಗಳು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ರಕ್ತ ಕೊಟ್ಟೇವೂ, ಪ್ರಾಣ ಬಿಟ್ಟೇವೂ ತಮಿಳುನಾಡಿಗೆ ನೀರು ಹರಿಸದಂತೆ ಘೋಷಣೆ ಕೂಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೆಆರ್‌ಎಸ್ ನಿರ್ಮಾಣವಾದ ಕಾಲದಿಂದಲೂ ಬ್ರಿಟೀಷರಿಂದ ಹಿಡಿದು ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಕರ್ನಾಟಕ ಮತ್ತು ಕನ್ನಡಿಗರಿಗೆ ನಿರಂತರ ಅನ್ಯಾಯವಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದೆ ಕನ್ನಂಬಾಡಿಯಲ್ಲಿ ನೀರಿಲ್ಲದೆ ಬೆಳೆ ನಷ್ಟ ಅನುಭವಿಸಿರುವ ಕಾವೇರಿ ಕೊಳ್ಳದ ರೈತರು, ಈ ಬಾರಿ ಜನ-ಜಾನುವಾರುಗಳಿಗೆ ನೀರು ಒದಗಿಸಲು ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ವಾಸ್ತವ ಪರಿಸ್ಥಿತಿ ಮನಗಂಡಿದ್ದರೂ, ಈಗಾಗಲೇ ಮೆಟ್ಟೂರು ಡ್ಯಾಂನಲ್ಲಿ ಅವಶ್ಯ ನೀರಿದ್ದರೂ ತಮಿಳುನಾಡಿಗೆ ಬಾಕಿ ನೀರು ಹರಿಸಿ ಎಂದು ಸಮಿತಿ ಆದೇಶ ನೀಡುವುದು ಯಾವ ನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು 2 ರಾಜ್ಯಗಳ ನದಿ ನೀರಿನ ಹಂಚಿಕೆ ಬಿಕ್ಕಟ್ಟನ್ನು ಬಗೆಹರಿಸಲು ಮಧ್ಯೆ ಪ್ರವೇಶಿಸದೆ ಮೌನವಹಿಸಿದ್ದಾರೆ. ಕೇವಲ ರಾಜಕೀಯ ಲಾಭಗಳಿಗಷ್ಟೇ ರಾಜ್ಯವನ್ನು ಬಳಸಿಕೊಂಡ ರಾಜಕೀಯ ಪಕ್ಷಗಳಿಂದ ಕಾವೇರಿ ವಿಚಾರದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ಬರಗಾಲದ ಪರಿಸ್ಥಿತಿಯಲ್ಲೂ ಇಂತಹ ಅವೈಜ್ಞಾನಿಕ ಆದೇಶ ಎತ್ತಿ ಹಿಡಿದಿರುವ ಪ್ರಾಧಿಕಾರದ ನಿಲುವು ಖಂಡನೀಯ. ರಾಜ್ಯ ಕಾಂಗ್ರೆಸ್ ಸರ್ಕಾರ ಇಂತಹ ಆದೇಶಗಳ ವಿರುದ್ಧ ಸಮರ್ಥವಾಗಿ ವಾದ ಮಂಡಿಸಿ ಕನ್ನಂಬಾಡಿ ವಾಸ್ತವ ಸ್ಥಿತಿಯನ್ನು ಪ್ರಾಧಿಕಾರ ಹಾಗೂ ನ್ಯಾಯಾಲಯಕ್ಕೆ ಸೂಕ್ತ ಸಾಕ್ಷ ಆಧಾರಗಳಿಂದ ಮನದಟ್ಟು ಮಾಡಿಸಿ ರೈತರು ಹಾಗೂ ಜನರ ಹಿತ ಕಾಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರು ಸುಮಾರು 1 ಗಂಟೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಒದಗಿಸುವ ಜತೆಗೆ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಿದ್ದರು. ಈ ಮೂಲಕ ಟ್ರಾಫಿಕ್ ದಟ್ಟಣೆಯಾಗದಂತೆ ಕಾರ್ಯ ನಿರ್ವಹಿಸಿದರು. ಪಟ್ಟಣದಲ್ಲಿ ರಸ್ತೆ ತಡೆಯಿಂದ ವಿವಿಧೆಡೆ ತೆರಳಬೇಕಿದ್ದ ಪ್ರಯಾಣಿಕರು ಬಸ್ ಇಲ್ಲದೆ ನಿಲ್ದಾಣದಲ್ಲೇ ಕಾದು ಪರದಾಡಿದರು. ಮತ್ತೊಂದೆಡೆ ವಿವಿಧೆಡೆಯಿಂದ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ಪ್ರಯಾಣಿಕರನ್ನು ನಿಲ್ದಾಣಕ್ಕೆ ಕರೆತರಲಾಗದೆ ಕೆಲ ಸಾರಿಗೆ ಬಸ್ ಚಾಲಕರು ಹಾಗೂ ನಿರ್ವಾಹಕರು ರಸ್ತೆ ಮಧ್ಯೆ ಹೈರಾಣಾಗಿದ್ದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ, ರೈತ ಮುಖಂಡರಾದ ಪಾಂಡು, ಕಡತನಾಳು ಬಾಲಕೃಷ್ಣ, ಮೇಳಾಪುರ ಸ್ವಾಮಿಗೌಡ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಅಗ್ರಹಾರ ಶಂಕರ್, ಪಾಂಡವಪುರ ತಾಲೂಕು ಅಧ್ಯಕ್ಷ ನಾಗಣ್ಣ, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಅಂಬೇಡ್ಕರ್ ಒಕ್ಕೂಟಗಳ ತಾಲೂಕು ಅಧ್ಯಕ್ಷ ಗಂಜಾಂ ರವಿಚಂದ್ರು, ಅಲ್ಲಾಪಟ್ಟಣ ಕುಮಾರ್, ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್‌ಬಾಬು, ಕಾರ್ಯದರ್ಶಿ ಜಗದೀಶ್, ಉಗಮಚೇತನಾ ಸಂಘಟನೆ ಅಧ್ಯಕ್ಷೆ ಪ್ರಿಯಾ ರಮೇಶ್, ಎಎಪಿ ನಾಯಕಿ ಅಮ್ರೀನ್ ತಾಜ್, ಚಿಕ್ಕತಮ್ಮೇಗೌಡ ಇತರರು ಇದ್ದರು.