ಹೆದ್ದಾರಿಯಲ್ಲಿ ಬಸ್ ತಡೆದು ಪ್ರತಿಭಟನೆ

kem1
ಸಮಯಕ್ಕೆ ಸರಿಯಾಗಿ ಬಸ್ ಓಡಿಸುವಂತೆ ಆಗ್ರಹಿಸಿ ಕೆಂಭಾವಿ ಬಳಿಯ ಜೈನಾಪುರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ ತಡೆದು ದಿಢೀರ್ ಪ್ರತಿಭಟನೆ ಮಾಡಿ, ಚಾಲಕ-ನಿರ್ವಾಹಕರ ಜತೆ ವಾಗ್ವಾದಕ್ಕಿಳಿದರು.
Published on

ಕೆಂಭಾವಿ: ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ರೊಚ್ಚಿಗೆದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಜೈನಾಪುರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಬಸ್ ತಡೆದು ದಿಢೀರ್ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ವಲಯದ ಹಲವು ಗ್ರಾಮಗಳಿಂದ ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಟ್ಟಣಕ್ಕೆ ಬರುತ್ತಾರೆ. ಆದರೆ ಸಾರಿಗೆ ಇಲಾಖೆಯಿಂದ ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ನಿತ್ಯ ನೂರಾರುವ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗುವAತಾಗಿದೆ. ಇದರಿಂದ ಬೇಸತ್ತ ಶಾಲಾ ಮಕ್ಕಳು ಸುರಪುರ ಘಟಕದ ಬಸ್‌ನ್ನು ರಾಜ್ಯ ಹೆದ್ದಾರಿಯಲ್ಲಿ ತಡೆದು ದಿಢೀರ್ ಪ್ರತಿಭಟನೆ ಮಾಡಿದರು.

ಸುರಪುರ ಘಟಕದಿಂದ ಬೆಳಗ್ಗೆ 8ಕ್ಕೆ ಬರಬೇಕಾದ ಬಸ್ 10 ಗಂಟೆ ನಂತರ ಬರುತ್ತಿದ್ದು, ಇದರಿಂದ ನಾವು ಶಾಲಾ-ಕಾಲೇಜುಗಳಿಗೆ ಹೋಗುವುದಾದರು ಹೇಗೆ ಎಂದು ಪ್ರಶ್ನಿಸಿದರು. ಜೈನಾಪುರ, ಕಿರದಳ್ಳಿ, ಹೆಗ್ಗಣದೊಡ್ಡಿ ಸೇರಿ ಹಲವು ಗ್ರಾಮಗಳು ಈ ರಾಜ್ಯ ಹೆದ್ದಾರಿ ಅಕ್ಕಪಕ್ಕದಲ್ಲಿ ಬರುತ್ತಿದ್ದು ಬಸ್ಸಿನ ಓಡಾಟವಿಲ್ಲದೆ ತೀವ್ರ ತೊಂದರೆಯಾಗಿದೆ ಕೂಡಲೇ ಹೆಚ್ಚಿನ ಬಸ್ ಒದಗಿಸುವ ಮೂಲಕ ಸಮಯಕ್ಕೆ ಸರಿಯಾಗಿ ಓಡಿಸಬೇಕು ಎಂದು ಆಗ್ರಹಿಸಿದರು. ಇದರಿಂದ ಕೆಲಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು.

ಪ್ರತಿಭಟನೆ ಸುದ್ದಿ ತಿಳಿಯುತ್ತಲೆ ಸ್ಥಳಕ್ಕಾಗಮಿಸಿದ ಸಂಚಾರ ನಿಯಂತ್ರಕ ಸಿದ್ಧನಗೌಡ ಅವರು ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿ ಶೀಘ್ರವೇ ಸಮಯಕ್ಕೆ ಬಸ್ ಓಡಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ಪಿಎಸ್‌ಐ ರಾಜಶೇಖರ ರಾಠೋಡ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net