

ಜಗಳೂರು: ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ಮಾಳಮ್ಮನಹಳ್ಳಿ ಗ್ರಾಮದ ಬಳಿ ರಸ್ತೆ ಮಧ್ಯೆ ಗುಂಡಿಗಳು ನಿರ್ಮಾಣವಾಗಿದ್ದು, ಅಪಾಯಕ್ಕೆ ಅಹ್ವಾನ ನೀಡುತ್ತಿವೆ.
ನಿತ್ಯ ದಾವಣಗೆರೆಯಿಂದ ಜಗಳೂರಿಗೆ ಲೆಕ್ಕವಿಲ್ಲದಷ್ಟು ವಾಹನಗಳು ಓಡಾಡುತ್ತಿವೆ. ಆದರೆ ಈಗ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದ ವಾಹನ ಸವಾರರಿಗೆ ತಲೆ ನೋವಾಗಿ ಪರಿಣಮಿಸಿದೆ. ತಿಂಗಳ ಹಿಂದೆ ನಿರಂತರ ಮಳೆಯಿಂದ ಮತ್ತಷ್ಟು ಗುಂಡಿ ಬಿದ್ದು ಹೊಂಡದಂತಾಗಿದೆ.
ಶಾಲಾ ವಾಹನ, ಬೈಕ್‌ಗಳು ಇದೇ ರಸ್ತೆ ಮೂಲಕ ಸರ್ಕಸ್ ಮಾಡುತ್ತಾ ಸಾಗುತ್ತಿವೆ. ಕೆಲವೊಮ್ಮೆ ಬೈಕ್ ಸವಾರರು ಬಿದ್ದು ಮೈ,ಕೈ ಗಾಯ ಮಾಡಿಕೊಂಡ ಘಟನೆಗಳು ಕೂಡ ನಡೆದಿವೆ.
ಅಧಿಕಾರಿಗಳು ರಸ್ತೆಯ ದುಸ್ಥಿತಿಯನ್ನು ಕಣ್ಣಾರೆ ಕಂಡರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ದುರಸ್ತಿಪಡಿಸಬೇಕು. ಇಲ್ಲದಿದ್ದರೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಹೊಸದಾಗಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಈಗಾಗಲೇ ಖುದ್ದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿದೆ. ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗುವುದು. ಅನುದಾನ ಬಿಡುಗಡೆಯಾದ ಕೂಡಲೇ ಹೊಸ ರಸ್ತೆ ನಿರ್ಮಿಸಲಾಗುವುದು.
ನಾಗರಾಜ್, ಎಇಇ, ಲೋಕೋಪಯೋಗಿ ಇಲಾಖೆ